ಮುಂಬೈ: ಟಾಟಾ ಗ್ರೂಪ್‌ಗೆ ಹೊಸ ವಾರಸುದಾರರಾಗಿ ಟಾಟಾ ಟ್ರಸ್ಟ್ ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಇಂದು (ಶುಕ್ರವಾರ) ಟಾಟಾ ಟ್ರಸ್ಟ್ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ ಗ್ರೂಪ್ ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್ ನಲ್ಲಿ ಟಾಟಾ ಟ್ರಸ್ಟ್ ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್‌ನ ಒಡೆತನ ನೋಯಲ್ ಟಾಟಾಗೆ ಸಿಗಲಿದೆ.
67 ವರ್ಷದ ನೋಯಲ್ ಟಾಟಾ ಅವರು ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ. ಟಾಟಾ ಕುಟುಂಬಕ್ಕೆ ಸೇರಿದ ಸರ್ ದೊರಾಬ್‌ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಮಂಡಳಿಗಳ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ನೋಯಲ್ ಟಾಟಾ ಅವರು ಮುಂದಿನ ವಾರಸುದಾರ ಎಂಬುದು ಬಹುತೇಕ ನಿಶ್ಚಿತವಾಗಿತ್ತು.
ನೋಯಲ್ ಟಾಟಾ ಅವರು ಬಹಳ ವರ್ಷಗಳಿಂದ ಟಾಟಾ ಗ್ರೂಪ್‌ನ ವಿವಿಧ ಬ್ಯುಸಿನೆಸ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟೈಟಾನ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೆ ವೈಸ್ ಛೇರ್ಮನ್ ಆಗಿದ್ದಾರೆ. ಫ್ಯಾಷನ್ ಉಡುಪುಗಳ ಟ್ರೆಂಟ್ ಸಂಸ್ಥೆಯ ಛೇರ್ಮನ್ ಆಗಿದ್ದಾರೆ. ಎನ್‌ಬಿಎಫ್‌ಸಿ ಕ್ಷೇತ್ರದ ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಸಂಸ್ಥೆಗೂ ಅವರೇ ಮುಖ್ಯಸ್ಥರಾಗಿದ್ದಾರೆ. ಇನ್ನು ವೋಲ್ಟಾಸ್ ಸಂಸ್ಥೆಯ ಮಂಡಳಿಯಲ್ಲೂ ಅವರು ಸ್ಥಾನ ಹೊಂದಿದ್ದಾರೆ.
87 ವರ್ಷದ ರತನ್ ಟಾಟಾ ಮೊನ್ನೆ ಬುಧವಾರ ಸಂಜೆ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ರತನ್ ಅವರ ತಂದೆ ನವಲ್ ಟಾಟಾ ಅವರಿಗೆ ಎರಡು ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದರು. ರತನ್ ಮತ್ತು ಜಿಮ್ಮಿ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯಲ್ ಟಾಟಾ ಅವರು ಎರಡನೇ ಪತ್ನಿಯ ಮಗ. ನೋಯಲ್ ಅವರಿಗೆ ಒಂದು ಗಂಡು ಮಗು ಸೇರಿ ಮೂವರು ಮಕ್ಕಳಿದ್ದಾರೆ.