Share this news

ಕಾರ್ಕಳ: ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ದಲಿತ ಸಂಘಟನೆಯವರು ನೀಡಿದ ದೂರಿನ ಮೇರೆಗೆ ಹಿಂಜಾವೇ ಮುಖಂಡ ಉಮೇಶ್ ನಾಯ್ಕ್ ಎಂಬವರನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನಲೆ:
ಹಿಂಜಾವೇ ಮುಖಂಡ ಉಮೇಶ್ ನಾಯ್ಕ್ ಮರಾಠಿ ಸಮುದಾಯದ ಉಡುಪಿ ಜಿಲ್ಲಾ ಮುಖಂಡರಾಗಿದ್ದು,
ನವೆಂಬರ್‌ ನಲ್ಲಿ ಮೂಡಬಿದಿರೆಯಲ್ಲಿ ನಡೆಯಲಿರುವ ಮರಾಠಿ ಸಮುದಾಯದ ರಾಜ್ಯ ಮಟ್ಟದ ಸಮಾವೇಶದ ಆಮಂತ್ರಣ ಪತ್ರಿಕೆಯಲ್ಲಿ ಛತ್ರಪತಿ ಶಿವಾಜಿ ಹಾಗೂ ಶೃಂಗೇರಿ ಶಾರದಾ ದೇವಿಯ ಭಾವಚಿತ್ರ ಮುದ್ರಿಸುವ ಬದಲಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸಲಾಗಿತ್ತು. ಆದರೆ ಸಂಘಟಕರ ಈ ನಿಲುವಿಗೆ ಉಮೇಶ್ ನಾಯ್ಕ್ ಸೇರಿದಂತೆ ಉಡುಪಿ ಜಿಲ್ಲೆಯ ಬಹುತೇಕ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೂಡಬಿದಿರೆಯಲ್ಲಿ ನಡೆಯುವ ಮರಾಠಿ ಸಮ್ಮೇಳನ ಕೇವಲ ಮರಾಠಿ ಸಮುದಾಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ,ಈ ಕಾರ್ಯಕ್ರಮದಲ್ಲಿ ಮರಾಠಿ ಸಮುದಾಯದ ಆಚಾರ, ವಿಚಾರ, ಧಾರ್ಮಿಕ ಆಚರಣೆಗಳು ಹಾಗೂ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯೇ ಹೊರತು ಇದರಲ್ಲಿ ಅಂಬೇಡ್ಕರ್ ಭಾವಚಿತ್ರ ಅಪ್ರಸ್ತುತ ಎನ್ನುವುದು ಉಮೇಶ್ ನಾಯ್ಕ್ ಅವರ ವಾದವಾಗಿತ್ತು. ಆದ್ದರಿಂದ ಅಂಬೇಡ್ಕರ್ ಭಾವಚಿತ್ರದ ಬದಲು
ಮರಾಠಿ ಸಮಾಜಕ್ಕೆ ಸಂಬಂಧಪಟ್ಟ ಛತ್ರಪತಿ ಶಿವಾಜಿ ಹಾಗೂ ಮರಾಠಿ ಸಮುದಾಯದ ಗುರುಪೀಠವಾಗಿರುವ ಶೃಂಗೇರಿ ಶಾರದಾಂಬೆಯ ಭಾವಚಿತ್ರ ಮುದ್ರಿಸಬೇಕೆಂದು ಉಮೇಶ್ ನಾಯ್ಕ್ ಅವರ ಬೆಂಬಲಿಗರು ಬಿಗಿಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸಂಘಟಕರು ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಎರಡು ಬಣಗಳ ನಡುವೆ ತಿಕ್ಕಾಟ ಜೋರಾಗಿತ್ತು.

ಇದೇ ವಿಚಾರವಾಗಿ ಮರಾಠಿ ಸಮ್ಮೇಳನದ ವಾಟ್ಸಾಪ್ ಗ್ರೂಪಿನಲ್ಲಿ ಈ ಕುರಿತು ಹಲವು ಬಾರಿ ವಾಯ್ಸ್ ಮೆಸೇಜ್ ಗಳ ಮೂಲಕ ಸಂಘರ್ಷ ನಡೆಯುತ್ತಿತ್ತು.ಇದೇ ವಿಚಾರವಾಗಿ ಮತ್ತೆ ಉಮೇಶ್ ನಾಯ್ಕ್ ಕಾರ್ಯಕ್ರಮ ಆಯೋಜಕರಾದ ರಾಮಚಂದ್ರ ಕೆಂಬಾರೆ ಹಾಗೂ ಶಂಕರ್ ನಾಯ್ಕ್ ಅವರ ವಿರುದ್ಧ ವಾಟ್ಸಾಪ್ ಗ್ರೂಪಿನಲ್ಲಿ ವಾಯ್ಸ್ ಮೆಸೇಜ್ ಮೂಲಕ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಅಂಬೇಡ್ಕರ್ ಹಾಗೂ ದಲಿತರ ಕುರಿತು ಮಾತನಾಡಿದ್ದರು. ಇದೇ ವಾಯ್ಸ್ ಮೆಸೇಜನ್ನು ಗ್ರೂಪಿನಲ್ಲಿದ್ದ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದರು.ಇದು ಭಾರೀ ವಿವಾದಕ್ಕೆ ಕಾರಣವಾಯಿತು.

ಇದರಿಂದ ಕೆರಳಿದ ದಲಿತ ಸಂಘಟನೆ ಮುಖಂಡರು ಉಮೇಶ್ ನಾಯ್ಕ್ ವಿರುದ್ಧ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಉಮೇಶ್ ನಾಯ್ಕ್ ಅವರನ್ನು ಬಂಧಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *