Share this news

ಉಡುಪಿ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ, ಫ್ರೋನಿಯಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ರಾಣಿ ಚೆನ್ನಮ್ಮ ಮಹಿಳಾ ವೆಲ್ಡರ್ ತರಬೇತಿ ಕಾರ್ಯಕ್ರಮಕ್ಕೆ ಅ.16 ರಂದು ಎನ್‌ಎಂಎಎAಐಟಿ-ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿಯಲ್ಲಿ ಚಾಲನೆ ನೀಡಲಾಯಿತು.

ಇತಿಹಾಸದಲ್ಲಿ ಕೇಳಿ ತಿಳಿದ ಯೋಧ ರಾಣಿಯ ಹೆಸರಿನ ಈ 45 ದಿನಗಳ ತರಬೇತಿಯು ನುರಿತ ಕಾರ್ಯಪಡೆಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಕ್ರಮವನ್ನು ವಿಶೇಷವಾಗಿ ಮಂಗಳೂರಿನ ಪ್ರಜ್ ಜೆನ್ ಎಕ್ಸ್ ಲಿಮಿಟೆಡ್ ನಿಂದ ಹೊಸದಾಗಿ ನೇಮಕಗೊಂಡ 25 ಮಹಿಳಾ ವೆಲ್ಡರ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಬಹುಶಃ ಮಂಗಳೂರು ಮತ್ತು ಕರ್ನಾಟಕದಲ್ಲಿ ಈ ರೀತಿಯ ತರಬೇತಿ ಮೊದಲನೆಯದಾಗಿದೆ.

ಪ್ರಜ್ ಜೆನ್ ಎಕ್ಸ್ ಲಿಮಿಟೆಡ್ ನ ಹಿರಿಯ ವ್ಯವಸ್ಥಾಪಕಿ (ಆಡಳಿತ ಮತ್ತು ಸಂಪರ್ಕ) ಶ್ರೀಮತಿ ಪ್ರಜ್ವಲ್ ಶೆಟ್ಟಿ ಅವರು ಆಧುನಿಕ ಉದ್ಯಮದಲ್ಲಿ ಮಹಿಳಾ ವೆಲ್ಡರ್ ಗಳಿಗೆ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ ಮಾತನಾಡಿದರು. ಸಾಂಪ್ರದಾಯಿಕ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹೊಸ ದೃಷ್ಟಿಕೋನಗಳನ್ನು ತರುವ ಮೂಲಕ ಮಹಿಳೆಯರು ನುರಿತ ಕಾರ್ಯಪಡೆಯಲ್ಲಿ ಹೇಗೆ ಕ್ರಾಂತಿಕಾರಕ ಬದಲಾವಣೆ ಮಾಡಬಹುದು ಎಂದು ಅವರು ತಿಳಿಸಿದರು.

ಫ್ರೋನಿಯಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಾದೇಶಿಕ ವ್ಯವಸ್ಥಾಪಕ ಅಭಯ್ ಪೈವರು ಮಾತನಾಡಿ ‘ಈ ವಿಶೇಷ ವೆಲ್ಡಿಂಗ್ ಕೌಶಲ್ಯವು ಮಹಿಳೆಯರಿಗೆ ಮಾತ್ರವಲ್ಲದೆ ದೊಡ್ಡ ಸಮಾಜ ಮತ್ತು ರಾಷ್ಟ್ರಕ್ಕೆ ಅಪಾರ ಮೌಲ್ಯವನ್ನು ತರುತ್ತದೆ’ ಎಂದರು. ಇಂತಹ ಉಪಕ್ರಮಗಳು ಗಮನಾರ್ಹ ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಿಕ ಕ್ಷೇತ್ರಗಳಲ್ಲಿ ಮಹಿಳೆಯರಲ್ಲಿ ಕೌಶಲ್ಯದ ಅಂತರವನ್ನು ಕಡಿಮೆ ಮಾಡುವ ಅಗತ್ಯವನ್ನು ವಿವರಿಸಿದರು. ವೆಲ್ಡಿಂಗ್ ಉದ್ಯಮದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ, ಅವರು ಸರಿಯಾದ ತರಬೇತಿಯೊಂದಿಗೆ, ಉದ್ಯಮ ಮತ್ತು ಸಮಾಜ ಎರಡಕ್ಕೂ ಗಣನೀಯವಾಗಿ ಕೊಡುಗೆ ನೀಡಬಹುದು ಎಂದರು.

ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪಿ.ಪೈ, ಸಹ ಪ್ರಾಧ್ಯಾಪಕ ಡಾ.ವಿಜೀಶ್ ವಿ., ಸಹಾಯಕ ಪ್ರಾಧ್ಯಾಪಕರಾದ ರಜತ್ ಎನ್.ರಾವ್ ಮತ್ತು ರಾಘವೇಂದ್ರ ಪೈ ಅವರ ಸಹಯೋಗದೊಂದಿಗೆ ಈ ತರಬೇತಿಯು ಭಾಗವಹಿಸುವವರಿಗೆ ಆರ್ಕ್ ವೆಲ್ಡಿಂಗ್ ನಲ್ಲಿ ಅನುಭವವನ್ನು ನೀಡುತ್ತದೆ.

Leave a Reply

Your email address will not be published. Required fields are marked *