Share this news

ಉಡುಪಿ : ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಸುರಿದ ಮುಂಗಾರು ಮಳೆ ಯಿಂದ ಒಟ್ಟು ಸುಮಾರು 28721.21 ಲಕ್ಷ ರೂ.(287.21ಕೋಟಿ ರೂ.) ಅಂದಾಜು ಹಾನಿ ಸಂಭವಿಸಿದ್ದು, ಇವುಗಳ ಪುನರ್‌ ನಿರ್ಮಾಣ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ವಾಡಿಕೆಗಿಂತ ಶೇ. 15ರಷ್ಟು ಹೆಚ್ಚು ಮಳೆ ಬಿದ್ದಿದೆ. ಇದರಿಂದ ರಸ್ತೆ, ಸೇತುವೆ, ವಿದ್ಯುತ್ ಸರಬರಾಜು ಕಂಬ, ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಲೈನ್‌ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಆಗಿರುವ ಹಾನಿಯನ್ನು 287.21 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಹೀಗೆ ಆಗಿರುವ ಹಾನಿಗಳ ಪುನರ್ ನಿರ್ಮಾಣ ಕಾಮಗಾರಿಗೆ ವಿಶೇಷ ಆದ್ಯತೆ ನೀಡುವಂತೆ ಅವರು ಸೂಚಿಸಿದರು.

ಅದರಲ್ಲೂ ವಿವಿಧ ಮೂಲಸೌಕರ್ಯಗಳಿಗೆ ಆಗಿರುವ ಹಾನಿಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ತ್ವರಿತಗತಿಯಲ್ಲಿ ಕೈಗೊಂಡು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಯಾವುದೇ ಇಲಾಖೆ ಈಗಾಗಲೇ ಆಗಿರುವ ಮನೆಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವಹಾನಿಗೆ ಸಂಬಂಧಿಸಿ ದಂತೆ ಪರಿಹಾರ ಬಾಕಿ ಇರಿಸಿಕೊಳ್ಳಬಾರದು. ಶಾಲೆ, ಅಂಗನವಾಡಿ ಹಾಗೂ ರಸ್ತೆಗಳ ತುರ್ತು ದುರಸ್ಥಿ ಕಾರ್ಯಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನವೆಂಬರ್ ಅಂತ್ಯದ ಒಳಗೆ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಎಂದ ಅವರು, ಶಾಲಾ ಕಟ್ಟಡ, ಅಂಗನವಾಡಿಗಳ ತುರ್ತು ದುರಸ್ಥಿ ಕಾಮಗಾರಿಗೆ ಅನುದಾನದ ಅಗತ್ಯವಿದ್ದಲ್ಲಿ ಕೂಡಲೆ ತಮಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಅರಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮದಿಂದ ಈ ತಿಂಗಳ ಅಂತ್ಯದವರೆಗೂ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಹಿಂಗಾರು ಮಳೆಯ ಸಂದರ್ಭದಲ್ಲಿ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ, ಮನೆಹಾನಿ ಆದ ಸಂದರ್ಭದಲ್ಲಿ ಅವರುಗಳನ್ನು ಕಾಳಜಿ ಕೇಂದ್ರ ಅಥವಾ ಇತರೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಎಲ್ಲಾ ಇಲಾಖಾ ಅಧಿಕಾರಿಗಳು ರಕ್ಷಣಾ ಸಾಮಾಗ್ರಿಗಳೊಂದಿಗೆ ಸನ್ನದ್ಧರಾಗಿರುವುದರ ಜೊತೆಗೆ, ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆಗಳನ್ನು ನೀಡಿದರು.

ಭತ್ತದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯದಲ್ಲಿ ಯಾವುದೇ ಫಲಾನುಭವಿಯ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಇಲಾಖೆ ಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಮೂಲಭೂತ ಸೌಲಭ್ಯಗಳ ದುರಸ್ಥಿಗೆ ಸಂಬಂಧಿ ಸಿದಂತೆ ವಿಶೇಷ ಪ್ರಸ್ತಾವನೆಗಳನ್ನು ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸಿ, ಬಂದ ಅನುದಾನದಲ್ಲಿ ಮೂಲಭೂತ ಸೌಕರ್ಯಗಳ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಗಮನಹರಿಸಬೇಕು ಎಂದರು.

ಭೂಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಹಾಗೂ ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಸರಕಾರಕ್ಕೆ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದೆ ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ ಖಾತೆಯಲ್ಲಿ 11.39 ಕೋಟಿ ರೂ. ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 165.70 ಲಕ್ಷ ರೂ. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಅನುದಾನದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

“ಸದ್ಯ ಮಳೆ ನಿಂತಿರುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕಲುಷಿತ ನೀರು ಶುದ್ಧ ಕುಡಿಯುವ ನೀರಿಗೆ ಸೇರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು. ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಕುಡಿಯಲು ಯೋಗ್ಯ ವಾಗಿದ್ದಲ್ಲಿ ಮಾತ್ರ ಸೇವನೆಗೆ ಅವಕಾಶ ನೀಡಬೇಕು. ಕಲುಷಿತ ನೀರಿನ ಸೇವನೆ ಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಮರಣ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಬಾವಿ ಹಾಗೂ ನದಿ ನೀರಿಗೆ ಕೊಳಚೆ ನೀರು ಸೇರದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಹಾಗೂ ಸರಕಾರಿ ಬಾವಿಗಳನ್ನು ಸ್ವಚ್ಛಗೊಳಿಸಲು ತಕ್ಷಣವೇ ಮುಂದಾಗಬೇಕು ಎಂದರು.

ಇದೀಗ ಮಳೆ ನಿಂತಿರುವ ಕಾರಣ ಚರಂಡಿಯಲ್ಲಿ, ಕಾಲುವೆಗಳಲ್ಲಿ, ತೋಡುಗಳಲ್ಲಿ ಸಿಲುಕಿರುವ ಕಸ, ಕಡ್ಡಿ, ತರಗೆಲೆಗಳನ್ನು ತೆರವುಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿರುವ ಕಾರಣ ಎಲ್ಲಾ ಅಣೆಕಟ್ಟುಗಳ ಗುಣಮಟ್ಟವನ್ನು ಆಗಿಂದಾಗ್ಗೆ ಪರಿಶೀಲಿಸಿ, ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 

 

 

Leave a Reply

Your email address will not be published. Required fields are marked *