ಬೆಂಗಳೂರು : ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸ್ವಚ್ಛ ಅಬಕಾರಿ ಅಭಿಯಾನದಡಿ ನಾಳೆ (ನ. 20) ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಕರೆ ನೀಡಿದೆ.
ಕರ್ನಾಟಕದ ಬಾರ್ ಮಾಲೀಕರು ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಜತೆಗೆ ವರ್ಗಾವಣೆ ಮತ್ತು ಪ್ರಮೋಷನ್‌ಗೆ ಲಂಚದ ವ್ಯವಹಾರ ನಡೆಯುತ್ತಿದೆ ಇದರಿಂದಾಗಿ ನಕಲಿ ಮದ್ಯದ ಪ್ರಮಾಣ ಹೆಚ್ಚಾಗಿದೆ ಎನ್ನುವ ಆರೋಪವಿದೆ.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ, ಪ್ರಮೋಷನ್ ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂಪಾಯಿ ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿAದ ಅಂತಾರಾಜ್ಯದ ನಕಲಿ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದಾರೆ.
ಅದರಲ್ಲೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ದ 700 ಕೋಟಿ ರೂ. ವಸೂಲಿ ಮಾಡಿದ ಗಂಭೀರ ಆರೋಪಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಮಹಾರಾಷ್ಟ್ರ ಚುನಾವಣೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಆರ್‌ಬಿ ತಿಮ್ಮಾಪುರ ಬದಲಾವಣೆಯೂ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಮದ್ಯದಂಗಡಿ ಮಾಲೀಕರು (ನಾಳೆ) ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದ್ದಾರೆ.