ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ನಿಯಮಾವಳಿ ಉಲ್ಲಂಘನೆ, ಮಾದಕ ದ್ರವ್ಯಗಳ ಅಕ್ರಮ ಮಾರಾಟ ಮತ್ತು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ 292 ಫಾರ್ಮಸಿಗಳ ಪರವಾನಗಿಯನ್ನು ಹಿಂಪಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇಲಾಖೆ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ, ಅಕ್ರಮ ಎಸಗಿರುವುದು ಪತ್ತೆಯಾದ ಕಾರಣ 1,245 ಫಾರ್ಮಸಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವು ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ, ನಿಯಮಾವಳಿ ಉಲ್ಲಂಘನೆ, ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿರುವ ಫಾರ್ಮಸಿಗಳ ಬಗ್ಗೆ ಸಚಿವರು ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದ್ದಾರೆ. 2022-23 ಮತ್ತು 2023-24ರ ಅವಧಿಯಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟಕ್ಕಾಗಿ 89 ಫಾರ್ಮಸಿಗಳ ವಿರುದ್ಧ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಾದಕ ದ್ರವ್ಯಗಳ ಅಕ್ರಮ ಮಾರಾಟದ ಅನುಮಾನದ ಮೇಲೆ 699 ಫಾರ್ಮಸಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿತ್ತು. 89 ಫಾರ್ಮಸಿಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು 23 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.