ಮಂಗಳೂರು: ಮಂಗಳೂರು ಕಮೀಷನರೆಟ್ ವ್ಯಾಪ್ತಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್‌ನವನಾಗಿದ್ದು ಪ್ರಸ್ತುತ ತೊಕ್ಕೊಟ್ಟು ಪೆರ್ಮನೂರು ಚೆಂಬುಗುಡ್ಡೆಯಲ್ಲಿ ವಾಸವಿರುವ ಹಬೀಬ್ ಹಸನ್ ಆಲಿಯಾಸ್ ಚೊಂಬುಗುಡ್ಡೆ ಹಬೀಬ್ ಆಲಿಯಾಸ್ ಅಬ್ಬಿ (43) ಮತ್ತು ಬಂಟ್ವಾಳ ಬಿ.ಮೂಡ ಅದ್ದೆಡ್ಡಿ ಹೌಸ್ ನ ಉಮ್ಮರ್ ಶಿಯಾಫ್ (29) ಬಂಧಿತ ಆರೋಪಿಗಳು .
ಡಿ. 9ರಂದು ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೋಳ ಗ್ರಾಮದ ಸುಂಕಮಾರು- ಮಂಜರಪಲ್ಕೆ ಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಸಂತಿ ಅವರಲ್ಲಿ ಬೈಕ್‌ನಲ್ಲಿ ಬಂದ ಯುವಕ ಮತ್ತು ಯುವತಿ ಭಾಸ್ಕರ್ ಅವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳಿ ಬೈಕ್ ಸವಾರನು ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ.
ಡಿ. 6ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಸುಜಿನಾ ಡಿಸೋಜಾ ಅವರು ಕೆಲಸದಲ್ಲಿರುವಾಗ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು, ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದು, ದಾರಿಯನ್ನು ಹೇಳಿ ಅಂಗನವಾಡಿಯ ಬಾಗಿಲನ್ನು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಒಳಗೆ ಪ್ರವೇಶಿಸಿದ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್‌ನಾಯ್ಕ್ ಅವರ ನೇತೃತ್ವದಲ್ಲಿ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್.ಎಂ., ಪಿಎಸ್‌ಐ ಸುದೀಪ್ ಎಂ.ವಿ., ಎಎಸ್‌ಐ ಯವರಾದ ಮೋಹನ್ ಕೆ.ವಿ., ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.