ಬೆಂಗಳೂರು: ಶೈಕ್ಷಣಿಕ ಪ್ರವಾಸವನ್ನು ರದ್ದು ಮಾಡುವಂತೆ ವೆಬ್ ನ್ಯೂಸ್‌ಗಳಲ್ಲಿ ಹಾಗೂ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ವರದಿ ಸುಳ್ಳು ಎಂದು ಇಲಾಖೆ ಸ್ಪಷ್ಟನೆ ನೀಡಿ ಸುತ್ತೋಲೆ ಹೊರಡಿಸಿದೆ.
ಮುರುಡೇಶ್ವರದಲ್ಲಿ ನಡೆದ ದುರ್ಘಟನೆಯಿಂದ ಶಾಲಾ ಶಿಕ್ಷಣ ಇಲಾಖೆಯು 2024-2025ರ ಸಾಲಿನ ಶೈಕ್ಷಣಿಕ ಪ್ರವಾಸವನ್ನು ರದ್ದು ಮಾಡುವಂತೆ ಹಾಗೂ ಈಗಾಗಲೇ ಪ್ರವಾಸ ಹೊರಟಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಖಡಕ್ ಸೂಚನೆಯ ಆದೇಶ ನೀಡಿದೆ ಎಂದು ವೆಬ್ ನ್ಯೂಸ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವರದಿಗಳು ಹರಿದಾಡುತಿತ್ತು. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಮಾಡದಂತೆ ಹಾಗೂ ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ ಅಥವಾ ನಿರ್ದೇಶನ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ ಪ್ರವಾಸವನ್ನು ಆಯೋಜಿಸುವ ಶಾಲೆಗಳಿಗೆ ಸೂಚನೆ ಹಾಗೂ ನಿರ್ದೇಶನ ನೀಡಿದ್ದು, 2024ರ ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದೆ. ಇದರೊಂದಿಗೆ ಪ್ರವಾಸವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಪೂರ್ವಭಾವಿಯಾಗಿ ಯೋಜನೆಯನ್ನು ಕೈಗೊಂಡು ಅದರಂತೆ ಪ್ರವಾಸವನ್ನು ಕೈಗೊಳ್ಳುವಂತೆ ತಿಳಿಸಿದೆ.
ಪ್ರವಾಸದ ಸಂಧರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು ಹಾಗೂ ಎಲ್ಲಾ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರು ವಿದ್ಯಾರ್ಥಿಗಳ ಜೊತೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುವುದು, ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ/ಹಾನಿಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರರಾಗಿರುತ್ತಾರೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.