Share this news

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸಿದ್ದ ಮುಡಾ ಹಗರಣದ ಪ್ರಮುಖ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿರುದ್ಧ ಕೆಲವೇ ದಿನಗಳ ಹಿಂದೆ ಸೀರೆ ಕಳ್ಳತನದ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಕೃಷ್ಣ ವಿರುದ್ಧ ಕೂಡ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದಾರೆ.

ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದು ಈ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು.
ಮುಡಾ ಕರ್ಮಕಾಂಡ ಬಯಲಿಗೆಳೆದ ಸ್ನೇಹಮಯಿ ಕೃಷ್ಣ ವಿರುದ್ಧ ಸರ್ಕಾರ ಈ‌ ಹಿಂದೆ ಎಫ್ಐಆರ್ ದಾಖಲಿಸಿತ್ತು, ಇದೀಗ ಅಧಿಕಾರಿ ವಿರುದ್ಧ ಸೀರೆ ಕಳ್ಳತನ ಆರೋಪ ಹೊರಿಸಿದ ಬೆನ್ನಲ್ಲೇ ಮಹಿಳಾ ಅಧಿಕಾರಿ ರೂಪಾ ಅವರು ಕೃಷ್ಣ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ದೂರು ನೀಡಿದ್ದು, ಪೊಲೀಸರು ಈ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅವರ ಮೊಬೈಲ್ ಮೂರು ದಿನಗಳಿಂದ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ವಿರುದ್ಧ ದೂರು ಮಾಡಿದ್ದ ಸ್ನೇಹಮಯಿ
ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದರು.
ಸ್ನೇಹಮಯಿ ಕೃಷ್ಣ ನಾಪತ್ತೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಬಂಧನ ಭೀತಿಯಿಂದ ತಲೆಮರೆಸಿಕೊಂಡಿರಬಹುದೆಂದು ಶ‌ಂಕಿಸಲಾಗಿದೆ

 

Leave a Reply

Your email address will not be published. Required fields are marked *