ಬೆಂಗಳೂರು: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಡಿ. 31 ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ ಬೆನ್ನಲ್ಲೇ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಆ ಮೂಲಕ ಡಿ.31ರಂದು ಎಂದಿನAತೆ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿಯಲಿವೆ.
38 ತಿಂಗಳ ಹರಿಯರ್ಸ್ ಹಣ ಬಿಡುಗಡೆ ಮಾಡಬೇಕು ಮತ್ತು 2024ರ ಜನವರಿಯಿಂದ ವೇತನ ಹೆಚ್ಚಳ ಮಾಡಬೇಕು ಎನ್ನುವ ಎರಡು ಪ್ರಮುಖ ಬೇಡಿಕೆಗಳೊಂದಿಗೆ, ಅನಂತ್ ಸುಬ್ಬರಾವ್ ನೇತೃತ್ವದ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆ 6 ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳನ್ನು ನಿಲ್ಲಿಸಿ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.
ನಮ್ಮ ಬೇಡಿಕೆಗಳಾದ 38 ತಿಂಗಳ ಹರಿಯರ್ಸ್, ಜ. 1 ರಿಂದ ವೇತನ ಒಪ್ಪಂದ ಮಾಡಲಾಗಿದೆ. ಆ ಬಗ್ಗೆ ಸಿಎಂ ಸಿದ್ದರಾಮಯ್ಯ ನಮ್ಮ ಜೊತೆಗೆ ಮಾತಾಡುತ್ತಾರೆ. ಸಿಎಂ ಮಟ್ಟದಲ್ಲಿ ಮಾತಾಡಿದರೆ ಸಮಸ್ಯೆ ಬಗಹರಿಯುತ್ತದೆ ಎಂದು ನಾವು ಈಗಾಗಲೇ ಹೇಳಿದ್ದೇವೆ. ಸಿಎಂ ಸಭೆ ಕರೆಯುತ್ತಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ನಮಗೆ ಪತ್ರ ಕಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮುಷ್ಕರ ವಾಪಸ್ಸು ಪಡೆದುಕೊಂಡಿದ್ದೇವೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.