ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ, ಕೆಪಿಸಿಸಿ ನಾಯಕತ್ವ ಬದಲಾವಣೆ ಸಂಬAಧ ಆಗಾಗ ಹೇಳಿಕೆಗಳು, ಪ್ರತಿ ಹೇಳಿಕೆಗಳ ಬೆನ್ನಲ್ಲೇ ಇದೀಗ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ಬದಲಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ.
ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನರ್ ರಚನೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ನಾಗೇಂದ್ರರನ್ನು ಸಂಪುಟಕ್ಕೆ ಪುನರ್ ಸೇರ್ಪಡೆಗೊಳಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಜೊತೆಗೆ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರಿಗೂ ಬದಲಾವಣೆ ತೂಗುಗತ್ತಿ ಕಾದಿದೆಯಾ ಎಂಬ ಅನುಮಾನ ಮೂಡಿದೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಕೆಲವು ನಾಯಕರು ಸಂಪುಟ ಪುನರ್ ರಚನೆ ಅಸ್ತ್ರದ ಮೂಲಕ ಕೆಲ ಸಚಿವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಗೆ ಒತ್ತಡ ಹೇರುತ್ತಿದ್ದಾರೆ. ಸಂಪುಟ ಪುನರ್ ರಚನೆ ಕಸರತ್ತಿನ ಮೂಲಕ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವ ಯೋಚನೆ ಅವರದ್ದಾಗಿದೆ.