ಉಡುಪಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಉತ್ತಮ ಸಾಧಕ ಪ್ರಶಸ್ತಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಆಯ್ಕೆಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಮತ್ತು 2024ನೇ ಸಾಲಿನಲ್ಲಿ ಸಂಘ ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಜ.18 ಮತ್ತು 19ರಂದು ನಡೆಯುವ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಸಕ್ತ ಸಾಲಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ, ಸಂವಾದ, ಸ್ಥಾಪನಾ ದಿನಾಚರಣೆ, ಚುನಾವಣಾ ಮಾಹಿತಿ ಕಾರ್ಯಾಗಾರ, ಸಾಮಾಜಿಕ ಬದ್ಧತೆಯ ಕಾರ್ಯಕ್ರಮ, ಪತ್ರಕರ್ತರ ಪರ ಹೋರಾಟ, ಚರ್ಚಾಕೂಟ, ಪತ್ರಿಕಾ ದಿನಾಚರಣೆ, ಜನಜಾಗೃತಿ ಕಾರ್ಯಕ್ರಮ, ಗ್ರಂಥಾಲಯ ಉದ್ಘಾಟನೆ, ವಾರ್ಷಿಕ ಪ್ರವಾಸ, ರಜತ ಕ್ರೀಡಾ ಸಂಭ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ.
ಅಲ್ಲದೆ, ಉಡುಪಿ ಪತ್ರಕರ್ತರ ಸಂಘ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರವಾಗಿದೆ. ಅಂತೆಯೇ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಈಚೆಗೆ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದಲ್ಲಿ ಉಡುಪಿ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಜಿಲ್ಲಾ ಸಂಘಕ್ಕೆ ನೀಡಲಾಗಿದೆ ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘದ ಸದಸ್ಯ ನೀಡುತ, ಕಾರ್ಕಳದ ಹರಿಪ್ರಸಾದ್ ನಂದಳಿಕೆ ಅವರು ಕರ್ನಾಟಕ ಕಾರ್ಯನಿರತವಾಗಿದೆ ಪತ್ರಕರ್ತರ ಸಂಘ ನೀಡುವ ವಾರ್ಷಿಕ ಆರ್. ಎಲ್ ವಾಸುದೇವ ರಾವ್ ಪ್ರಶಸ್ತಿ (ಅರಣ್ಯ ಅತ್ಯುತ್ತಮ ವರದಿ)ಗೆ ಆಯ್ಕೆಯಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಇದ್ದರು.
ರಾಜ್ಯ ಸಮ್ಮೇಳನ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತುಮಕೂರು ಜಿಲ್ಲಾ ಸಂಘದ ಆತಿಥ್ಯದೊಂದಿಗೆ ರಾಜ್ಯ ಪತ್ರಕರ್ತರ 39ನೇ ಸಮ್ಮೇಳನ ಜ.18 ಮತ್ತು 19ರಂದು ತುಮಕೂರು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಜ.18ರಂದು ಬೆಳಗ್ಗೆ 8.30ಕ್ಕೆ ಗೃಹ ಸಚಿವ ಡಾ.ಪರಮೇಶ್ವರ ಮೆರವಣಿಗೆಗೆ ಚಾಲನೆ ನೀಡುವರು. 11 ಗಂಟೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು.
ಎರಡು ದಿನಗಳ ಸಮ್ಮೇಳನದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಸಂವಾದ ಮತ್ತು ವಿವಿಧ ಗೋಷ್ಟಿಗಳು ನಡೆಯಲಿವೆ. ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ.