Share this news

ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂಗಳ ಧಾರ್ಮಿಕ ಭಾವನೆ, ಸಂಸ್ಕೃತಿ ಆಚರಣೆಗಳ ಬಗ್ಗೆ ನಿರಂತರ ಧಕ್ಕೆ ತರುತ್ತಿದೆ. ಇದರ ಮುಂದುವರೆದ ಭಾಗವಾಗಿ ಕಾರ್ಕಳದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಕರಾವಳಿ ಜಿಲ್ಲೆಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಳುನಾಡಿನ ಗಂಡು ಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ, ಅನಾದಿ ಕಾಲದಿಂದಲೂ ಶ್ರದ್ದಾ ಭಕ್ತಿಯಿಂದ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿಯೂ ನಡೆಯುತ್ತಿದ್ದ ಯಕ್ಷಗಾನ ಕಲೆಗೆ ಹಲವು ಕಾನೂನುಗಳ ನೆಪವೊಡ್ಡಿ ತಡೆ ಮಾಡಿ ಮತೀಯ ಶಕ್ತಿಗಳ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಯಕ್ಷಗಾನ, ನಾಗಮಂಡಲ, ದೈವಾರಾಧನೆಯ ಭಾಗವಾಗಿ ಸಾಂಪ್ರದಾಯಿಕ ಕೋಳಿ ಅಂಕಗಳು ತುಳುನಾಡಿನ ಸಂಸ್ಕೃತಿಯ ಭಾಗವಾಗಿದ್ದರೂ ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಅನುಮತಿ ನೀಡದೇ ಪರೋಕ್ಷವಾಗಿ ಹತ್ತಿಕ್ಕಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿದೆ.

ರಾಜ್ಯ ಸರ್ಕಾರ ಒಂದು ಕಡೆ ಯಕ್ಷಗಾನ ಆಕಾಡೆಮಿ ಸ್ಥಾಪಿಸಿ ಯಕ್ಷಗಾನ ಉಳಿವಿಗೆ ಕೊಡುಗೆ ನೀಡುವಂತೆ ಬಿಂಬಿಸಿ, ಇನ್ನೊಂದು ಕಡೆ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಸರ್ಕಾರದ ದ್ವಂದ್ವ ನೀತಿಯನ್ನು ಜನತೆಯ ಮುಂದೆ ಪ್ರದರ್ಶಿಸಿದೆ.

ಹಲವಾರು ಭಕ್ತರು ತಮ್ಮ ಹರಕೆ ಸೇವೆಗಾಗಿ ಹಲವು ವರ್ಷಗಳ ಕಾಲ ಕಾದು ಆಯೋಜಿಸಿರುವ ವಿವಿಧ ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಸರ್ಕಾರ ತೊಂದರೆ ನೀಡುತ್ತಿರುವುದು ಅಕ್ಷಮ್ಯವಾಗಿದ್ದು ಸರ್ಕಾರ ಕೂಡಲೇ ಕರಾವಳಿ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮತೀಯ ಶಕ್ತಿಗಳು ಹಾಡುಹಗಲೇ ರಾಜಾರೋಷವಾಗಿ ಹಿಂದೂ ಸಮಾಜ ತಾಯಿಯ ಸ್ಥಾನದಲ್ಲಿ ಗೌರವಿಸುವ ಪೂಜ್ಯನೀಯ ಗೋ ಮಾತೆಯ ಕೆಚ್ಚಲು ಕೊಯ್ಯುವ ಕೆಲಸಕ್ಕೆ ಮುಂದಾಗಿದ್ದಾರೆ.ಅಮಾನುಷ ಕೃತ್ಯ ಎಸಗಿದ ಮತಾಂಧನಿಗೆ ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ರಕ್ಷಿಸುವ ಕೆಲಸಕ್ಕೆ ಖುದ್ದು ರಾಜ್ಯ ಸರ್ಕಾರವೇ ಬೆಂಗಾವಲಾಗಿ ನಿಂತಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಾ, ರಾಷ್ಟ್ರೀಯವಾದಿ ಚಿಂತನೆಯ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು ರಾಜ್ಯದ ಜನತೆ ಶೀಘ್ರದಲ್ಲೇ ಸರ್ಕಾರಕ್ಕೆ ದಿಟ್ಟ ಉತ್ತರ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *