ಮಂಗಳೂರು: ಬೈಕಂಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಮಿನಾ ಸಮೂಹ ಸಂಸ್ಥೆಗಳಿಗೆ ಸೇರಿದ ವಿವಿಧೋದ್ದೇಶ ಸಹಕಾರಿ ಸಂಘದ ಮಾಜಿ ಗುಮಾಸ್ತ ಲೋಕನಾಥ ಜಿ. ಶೆಟ್ಟಿ ಕೃಷ್ಣಾಪುರ ಎನ್ನುವಾತನಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ.
2011ರ ಎ. 1ರಿಂದ 2012ರ ಅಕ್ಟೋಬರ್ ಅವಧಿಯಲ್ಲಿ ನಗದು ವ್ಯವಹಾರದ 19,07,621 ರೂ. ನಗದನ್ನು ಸಂಸ್ಥೆಗೆ ಚೆಕ್ನಲ್ಲಿ ನೀಡಿದ್ದು, ಆ ಚೆಕ್ ಬ್ಯಾಂಕಿನಲ್ಲಿ ಪಾವತಿಯಾಗದೆ ವಾಪಸಾಗಿದೆ. ಈ ಬಗ್ಗೆ ಸಂಸ್ಥೆಯವರು ಮಂಗಳೂರಿನ 4ನೇ ಜೆ.ಎಂ.ಎಫ್.ಸಿ. 4ನೇ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 24,80,000 ರೂ. ದಂಡ ಮತ್ತು ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ಅಪರಾಧಿ ಮಂಗಳೂರಿನ 4ನೇ ಎಡಿಶನಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಕೋರ್ಟಿನಲ್ಲಿ ಅಪೀಲು ಮಾಡಿದ್ದು, ಈ ಕೋರ್ಟ್ ಟ್ರಯಲ್ ಕೋರ್ಟಿನ ಆದೇಶ ಎತ್ತಿ ಹಿಡಿದಿತ್ತು. ಈ ಆದೇಶದ ವಿರುದ್ಧ ಹೈಕೋರ್ಟಿನಲ್ಲಿ ಅಪೀಲು ಮಾಡಿದ್ದು, ಹೈಕೋರ್ಟ್ ಅಪರಾಧಿಗೆ ದಂಡದ ಮೊಬಲಗಿನ ಶೇ. 60 ಅನ್ನು ಕೋರ್ಟಿನಲ್ಲಿ ಡಿಪೋಸಿಟ್ ಮಾಡಬೇಕೆಂದು ಆದೇಶ ಮಾಡಿತ್ತು.
ಹೈಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಜೆ.ಎಂ.ಎಫ್.ಸಿ. ನ್ಯಾಯಾಲಯ ಲೋಕನಾಥ ಜಿ. ಶೆಟ್ಟಿಯನ್ನು ಜೈಲಿಗೆ ಕಳುಹಿಸಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಪರ ವಕೀಲ ಉದಯಾನಂದ ಎ. ಅವರು ವಾದ ಮಂಡಿಸಿದ್ದರು.
ಬೆಂಗಳೂರು: ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಜನವರಿ 31ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಸಲಹೆ ನೀಡಲಾಗಿದೆ.
ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನ ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ.
ಏಕ ಬಳಕೆಯ ಬಳಕೆಯ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ 2024ರ ನವೆಂಬರ್ನಲ್ಲಿಯೂ ಸುತ್ತೋಲೆ ಹೊರಡಿಸಲಾಗಿತ್ತು. ಆದಗ್ಯೂ ಸಹ ಸಚಿವಾಲಯವೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮವನ್ನು ಪಾಲಿಸದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ, ಇನ್ನು ಮುಂದೆ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ಮತ್ತೊಮ್ಮೆ ಸೂಚನೆ ನೀಡಲಾಗುತ್ತಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.