ಮಂಗಳೂರು : ಇಡೀ ರಾಜ್ಯದಲ್ಲೇ ಬಾರೀ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸ್ಥಳೀಯರಾದ ಬಂಟ್ವಾಳದ ಭಾಸ್ಕರ್ ಬೆಳ್ಚಪಾಡ ಮತ್ತು ಬಿ.ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ. ಇಡೀ ಪ್ರಕರಣದಲ್ಲಿ ಹೆಚ್ಚಾಗಿ ಕೇಳಿ ಬಂದಿದ್ದ ಶಶಿ ತೇವರ್ ಅದರಲ್ಲಿ ಒಬ್ಬನಾಗಿದ್ದಾನೆ.
ಜನವರಿ 17 ರಂದು ಉಳ್ಳಾಲ ಕೆಸಿರೋಡ್ ನಲ್ಲಿ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಹಾಡುಹಗಲೇ ದರೋಡೆ ಮಾಡಲಾಗಿತ್ತು, ಈ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತಲ್ಲದೇ, ಪೊಲೀಸ್ ಇಲಾಖೆ ವಿರುದ್ದ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಪ್ರಕರಣ ನಡೆದ ಬೆನ್ನಲ್ಲೇ ನಿದ್ರೆ ಬಿಟ್ಟು ಕೆಲಸ ಮಾಡಿದ ಮಂಗಳೂರು ಪೊಲೀಸರ ತಂಡ ದರೋಡೆ ನಡೆದ ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ದರೋಡೆ ಮಾಡಿದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
