ಮಂಗಳೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಇವರ ಆಶ್ರಯದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರ ಬೀಳ್ಕೊಡುಗೆ, ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರ ಹಾಗೂ ಜಿಲ್ಲಾ ಚಾಂಪಿಯನ್ಸ್ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಭಿನಂದಿಸುವ ಸಮಾರಂಭ, ಫ್ರಾದ್ ಸಾಯ್ಬ್ ಸಭಾಂಗಣ ಕುಲಶೇಖರ ಇಲ್ಲಿ ನಡೆಯಿತು.
ದಕ್ಷಿಣ ವಲಯದ ದೈಹಿಕ ಶಿಕ್ಷಣ ಶಿಕ್ಷಕರ ಕಠಿಣ ಪರಿಶ್ರಮದ ಫಲವಾಗಿ ಇಂದು ಈ ಭಾಗದ ಕ್ರೀಡಾ ಪಟುಗಳು ಉತ್ತಮ ಸಾಧನೆ ಮಾಡುವಂತಾಗಿದೆ. ಮಾತ್ರವಲ್ಲದೆ ಈ ಸಾಧಕರಿಗೆ ಶಿಕ್ಷಕರೇ ಪ್ರತಿ ವರ್ಷ ಹಣ ಸಂಗ್ರಹಿಸಿ,ನಗದು ಸಹಿತ ಪುರಸ್ಕರಿಸುವ ಕೆಲಸ ಅಭಿನಂದನಾರ್ಹ. ಈ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಸಮಾಜ ಕಟ್ಟುವ ಕೆಲಸ ನಡೆಯುತ್ತಿರುವುದು ಎಲ್ಲರೂ ಮೆಚ್ಚುವ ಅಂಶವಾಗಿದೆ ಎಂದು ಮಾಜಿ ಮೇಯರ್,ಪದವು ವಾರ್ಡಿನ ಕಾರ್ಪೊರೇಟರ್ ಭಾಸ್ಕರ್ ಕೆ ಅಭಿಪ್ರಾಯ ಪಟ್ಟರು.
ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾದ ರೆ| ಫಾ| ವಿಜಯ್ ಮೊಂತೆರೋ, ನಿವೃತ್ತಿ ಹೊಂದಿದ ಶಿಕ್ಷಕರಾದ ಕಿಲೆಂಜಾರಿನ ಶ್ರೀಮತಿ ಅಸುಂತ ಮೇರಿ ಸಿಕ್ವೇರಾ ಹಾಗೂ ಬಿಕರ್ಣಕಟ್ಟೆ ಶಾಲೆಯ ಶ್ರೀಮತಿ ಉಮಾವತಿ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ,ರಾಜ್ಯ ರಾಷ್ಟ್ರಮಟ್ಟದ 65 ವಿಜೇತ ಕ್ರೀಡಾಪಟುಗಳಿಗೆ ಅಭಿನಂದಿಸಿದರು.ಇಂತಹ ಅಪೂರ್ವ ಕಾರ್ಯಕ್ರಮ ನಮ್ಮ ಸಭಾಂಗಣದಲ್ಲಿ ನಡೆದಿರುವುದು ಸಂತಸವನ್ನು ತಂದಿದೆ.ಸಾಧನೆ ನಿರಂತರವಾಗಿ ಸಾಗಲಿ. ಇವತ್ತು ಪಡೆದಿರುವ ಅಭಿನಂದನೆ ನಿಮ್ಮ ಜೀವನದಲ್ಲಿ ಪ್ರೇರಣೆಯಾಗಿ ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ಬರಲಿ ಎಂದು ಶುಭ ಹಾರೈಸಿದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ ಮಾತನಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರತಿವರ್ಷ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಚಾಂಪಿಯನ್ ಆಗಿ ಮೂಡಿಬರುತ್ತಿರುವುದು ಸಂತಸದ ವಿಚಾರ.ಜೊತೆಗೆ ಅವರು ತರಬೇತಿ ನೀಡಿದ ವಿದ್ಯಾರ್ಥಿಗಳು ಕೂಡ ಚಾಂಪಿಯನ್ ಆಗಿ ಮೂಡಿ ಬರುತ್ತಿರುವುದು ದಕ್ಷಿಣ ವಲಯದ ಕೀರ್ತಿ ಹೆಚ್ಚಿಸಿದೆ. ನಮ್ಮ ಕಚೇರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಳು ರಾರಾಜಿಸುತ್ತಿವೆ ಇದಕ್ಕೆ ಕಾರಣರಾದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಭಿನಂದನೆಗಳು ಎಂದು ಹಾರೈಸಿದರು.
ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಎಂ ಕೆ ಮಂಜನಾಡಿ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಶುಭ ಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷರಾದ ಲಿಲ್ಲಿ ಪಾಯ್ಸ್ ಪ್ರಸ್ತಾವನೆಗೈದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಡಿ’ಸೋಜಾ, ರಾಜ್ಯ ಪದಾಧಿಕಾರಿ ಆಲಿಸ್ ಪಾಯ್ಸ್ ಉಪಸ್ಥಿತರಿದ್ದರು.
ಶಿಕ್ಷಕಿ ಜಯಲಕ್ಷ್ಮಿ ಗುರುಪುರ ಜಂಪ್ ರೋಪ್ ಸ್ಪರ್ಧೆ ಬಗ್ಗೆ ಹಾಗೂ ಸುರೇಶ್ ಶೆಟ್ಟಿ ಧ್ಯಾನ ಬಗ್ಗೆ ಕಾರ್ಯಗಾರ ನಡೆಸಿದರು. ಪ್ರಮೋದ್ ಕುಮಾರ್ ರೈ ಮತ್ತು ಸಿಲ್ವಿಯಾ ರೂತ್ ಕ್ಯಾಸ್ತಲಿನೋ ಸನ್ಮಾನ ಪತ್ರ ವಾಚಿಸಿದರು. ಭವ್ಯ,ಮಮತಾ, ಪ್ರದೀಪ್ ಕ್ರೀಡಾ ವಿಜೇತರ ಪಟ್ಟಿ ಇಕ್ವಿಟಿ ವಾಚಿಸಿದರು. ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ಜಯಶ್ರೀ ಕಿನ್ನಿಕಂಬಳ ವಂದಿಸಿದರು, ಶಿಕ್ಷಕರಾದ ರಾಜೀವ ನಾಯಕ್ ಮತ್ತು ಸುರೇಖಾ ಕಾರ್ಯಕ್ರಮ ನಿರೂಪಿಸಿದರು.
K