
ಮಂಗಳೂರು: ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ತೇರು ಮುರಿದು ಬಿದ್ದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡಿನಲ್ಲಿ ನಡೆದಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ಈ ವೇಳೆ ತೇರಿನಲ್ಲೇ ಇದ್ದ ಅರ್ಚಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯರಾತ್ರಿ ಈ ಘಟನೆ ನಡೆದಿದ್ದು, ರಥೋತ್ಸವಕ್ಕೆ ಹಲವು ಭಾಗಗಳಿಂದ ಭಕ್ತರ ದಂಡೇ ಹರಿದು ಬಂದಿತ್ತು. ಜಾತ್ರಾ ಸಂಭ್ರಮದ ವೇಳೆ ಈ ಅವಘಡ ನಡೆದಿದೆ. ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ರಥೋತ್ಸವ ಅದ್ಧೂರಿಯಾಗಿ ಸಾಗಿತ್ತು. ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗದೆ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ತಂತ್ರಿಗಳು ವಿಶೇಷ ಪೂಜೆ, ಪ್ರಾರ್ಥನೆ ಮಾಡಿ ಬಲಿ ಆರಂಭಗೊಂಡಿತು.ಬಳಿಕ ವಿವಿಧ ವಾದ್ಯಗೋಷ್ಠಿ, ಓಕುಳಿ, ಉರುಳು ಸೇವೆಯ ಸುತ್ತಿನ ಬಳಿಕ ದೇವರು ಮೂಷಿಕ ರೂಪದಲ್ಲಿ ಪುಷ್ಪಾಲಂಕೃತ ಚಿನ್ನದ ಪಲ್ಲಕ್ಕಿಯಲ್ಲಿ ಕುಳಿತು ಪೇಟೆ ಸವಾರಿಯಾಗಿ ಮಧ್ಯರಾತ್ರಿ 1.40ರಿಂದ 2 ಗಂಟೆಯ ಸುಮಾರಿಗೆ ರಥೋತ್ಸವ ಗದ್ದೆಗೆ ಆಗಮನವಾಯಿತು. ಮಧ್ಯರಾತ್ರಿ ರಥತೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ.
ರಥದ ಮುಂಭಾಗ ಕುಸಿದ ಬಳಿಕ ಚಂದ್ರಮಂಡಲ ತೇರಿನಲ್ಲಿ ದೇವರ ಉತ್ಸವ ಮುಂದುವರೆಯಿತು. ರಥೋತ್ಸವದ ವೇಳೆ ತೇರು ಕುಸಿದ ಕಾರಣ ಭಕ್ತರ ಸಮೂಹದಲ್ಲಿ ಆತಂಕ ಹೆಚ್ಚಾಗಿದೆ.



