ಕಾರ್ಕಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡ ಹಗಲಿನಲ್ಲಿಯೇ ಮನೆಯ ಹಿಂಬಾಗಿಲನ್ನು ಮುರಿದು ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಗೈದಿರುವ ಘಟನೆ ತಾಲೂಕಿನ ನೀರೆಯಲ್ಲಿ ಮೇ.28 ರಂದು ನಡೆದಿದೆ.
ನೀರೆಯ ರಾಧಾಕೃಷ್ಣ, ಅವರ ಪತ್ನಿ ಮತ್ತು ಪುತ್ರಿ ಅಂದು ಬೆಳಗ್ಗೆ 8 ಗಂಟೆಗೆ ಉಡುಪಿಗೆ ಕೆಲಸಕ್ಕೆ ಹೋಗಿದ್ದರು. ಆ ಬಳಿಕ 10 ಗಂಟೆಗೆ ಅವರ ಮಗನೂ ಮನೆಗೆ ಬೀಗ ಹಾಕಿ ಉಡುಪಿಗೆ ತೆರಳಿದ್ದರು. ಮನೆಯವರು ಸಂಜೆ ಬರುವ ವೇಳೆಗೆ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಬಾಗಿಲನ್ನು ಯಾವುದೋ ಸಾಧನದಿಂದ ತೆರೆದು ಕಪಾಟಿನಲ್ಲಿರಿಸಿದ್ದ 30 ಗ್ರಾಂ ತೂಕದ ಚಿನ್ನದ ಕಡಗ, ಇನ್ನೊಂದು ಕಪಾಟಿನಲ್ಲಿರಿಸಿದ್ದ ಬೆಳ್ಳಿಯ ಸೊಂಟದ ನೂಲು -2, ಬೆಳ್ಳಿಯ ತುಳಸಿ ಮಾಲೆ -1 ಮತ್ತು 1 ಜೊತೆ ಬೆಳ್ಳಿಯ ಕಾಲುಗೆಜ್ಜೆ ಇವುಗಳನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.