

ಹೆಬ್ರಿ:ಹೆಬ್ರಿ-ಕುಚ್ಚೂರು- ಸಿದ್ದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕಂಚರ್ಕಾಳ್ ಎಂಬಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮಳೆಯಿಂದ ಸ್ಥಗಿತಗೊಂಡಿದ್ದು,ವಾಹನ ಸಂಚಾರಕ್ಕೆ ನಿರ್ಮಿಸಿರುವ ತಾತ್ಕಾಲಿಕ ಬದಲಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ, ಸಂಪರ್ಕ ಬಂದ್ ಆಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಹೆಬ್ರಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರಸ್ತೆಯ ಸಂಪರ್ಕ ಕಡಿತಗೊಂಡಿರುವುದರಿಂದ ಮಾಂಡಿ ಮೂರ್ ಕೈ, ಮಡಾಮಕ್ಕಿ ಕಡೆಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಕಂಚರ್ಕಾಳ್ ಕಿರುಸೇತುವೆ ಅಪೂರ್ಣ ಕಾಮಗಾರಿ ಹಿನ್ನೆಲೆ ಸುಮಾರು 12 ಕಿಲೋಮೀಟರ್ ಸುತ್ತು ಬಳಸಿ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಬದಲಿ ರಸ್ತೆಯಲ್ಲಿ ಸರಿಯಾದ ಬಸ್ ವ್ಯವಸ್ಥೆಯಿಲ್ಲದೇ ಸಾರ್ವಜನಿಕರು, ಶಾಲಾ ಮಕ್ಕಳು ಸಿಕ್ಕಸಿಕ್ಕ ವಾಹನಗಳಲ್ಲಿ ಹತ್ತಿ ಪ್ರಯಾಣಿಸಬೇಕು ಇಲ್ಲವೇ ರಿಕ್ಷಾ ಮಾಡಿಕೊಂಡು ಪ್ರಯಾಣಿಸಬೇಕು, ಕಾರ್ಮಿಕರು, ಆಸ್ಪತ್ರೆಗೆ ಹೋಗುವರು ಏನು ಮಾಡಬೇಕೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಇದಲ್ಲದೇ
ಬದಲಿರಸ್ತೆಯಾದ ಬೇಳಂಜೆ, ಮೀನುಗದ್ದೆ, ಆರ್ಡಿ ಮೂಲಕ ಹೋಗುವ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದೆ. ಸಣ್ಣ ರಸ್ತೆ ಆಗಿರುವುದರಿಂದ ಬಸ್ ಓಡಾಡಲು ಸಮಸ್ಯೆ ಆಗುತ್ತದೆ. ಬೃಹತ್ ಗಾತ್ರದ ಗುಂಡಿಗಳಿರುವುದರಿಂದ ಸವಾರರು ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಬದಲಿ ರಸ್ತೆಯನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು
ಈ ಸೇತುವೆ ನಿರ್ಮಾಣಕ್ಕೆ ಮೇ ತಿಂಗಳಿನಲ್ಲಿ ಕಾಮಗಾರಿ ಅನುಮೋದನೆ ದೊರಕಿದ್ದು,ಮಳೆಗಾಲದಲ್ಲಿ ಕಾಮಗಾರಿ ನಡೆಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ರಸ್ತೆ ಸಂಪರ್ಕ ಇಲ್ಲದೇ ಅನೇಕ ಶಾಲಾ ವಿದ್ಯಾರ್ಥಿಗಳು, ಬಡ ಕೂಲಿ ಕಾರ್ಮಿಕರಿಗೆ ಸಮಸ್ಯೆ ಉಂಟಾಗಿದೆ. ಹೆಬ್ರಿ ತಾಲೂಕು ಕೇಂದ್ರ ಆಗಿರುವುದರಿಂದ ಎಲ್ಲಾ ಕೆಲಸಕ್ಕೆ ಇಲ್ಲಿ ಬರಬೇಕಾಗುತ್ತದೆ. ಅಧಿಕಾರಿಗಳ ನಿರ್ಲಕ್ಷದಿಂದ ನಮಗೆ ಸಮಸ್ಯೆ ಆಗಿರುವುದು ನಿಜ. ಅವರ ಕೋರಿಕೆಯಂತೆ ಎರಡು ದಿನ ಗಡುವು ನೀಡಲಾಗುವುದು. ಒಂದು ವೇಳೆ ಇಲಾಖೆ ಮಾತು ತಪ್ಪಿದ್ದಲ್ಲಿ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಎಚ್ಚರಿಸಿದರು
ಕಾರ್ಕಳ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಿಥುನ್ ಪ್ರತಿಭಟನಾ ಸ್ಥಳಕ್ಕಾಗಮಿಸಿ, ನಮಗೆ ಮೇ ತಿಂಗಲಿನಲ್ಲಿ ಕಾಮಗಾರಿಗೆ ಅನುಮೋಧನೆ ಸಿಕ್ಕಿದೆ. ಮಳೆ ಬೇಗನೆ ಆರಂಭವಾಗಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆಯನ್ನು ಬಂದ್ ಮಾಡಿದ್ದೇವೆ. ನಮಗೆ ಎರಡು ದಿನ ಸಮಯ ಕೊಡಿ ತಾತ್ಕಾಲಿಕ ರಸ್ತೆಯನ್ನು ದುರುಸ್ತಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಳೆ ಕಡಿಮೆಯಾದ ಕೂಡಲೇ ಸೇತುವೆ ಕೆಲಸ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ರಂಜಿತ್ ನಾಯ್ಕ, ಸುರೇಂದ್ರ, ಮೋಹನ್, ಪೂರ್ಣೇಶ್, ಬಾಲಣ್ಣ, ಪ್ರದೀಪ್ ಮುಂತಾದವರು ಹಾಜರಿದ್ದರು








