Share this news

ನವದೆಹಲಿ, ಜುಲೈ 02: ಕರ್ನಾಟಕದಲ್ಲಿ ಸಂಭವಿಸುತ್ತಿರುವ  ಹೃದಯಾಘಾತ(Heart Attack) ಪ್ರಕರಣಗಳಿಗೂ ಹಾಗೂ ಕೋವಿಡ್ 19 ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಐಸಿಎಂಆರ್​) ಸ್ಪಷ್ಟಪಡಿಸಿದೆ. ಕರ್ನಾಟಕದ ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಹೃದಯಾಘಾತದಿಂದ ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ರಾಜ್ಯದ ಕೆಲವೆಡೆ ಇದೇ ರೀತಿಯ ಪ್ರಕರಣಗಳು ವರದಿಯಾಗಿದೆ. ಈ ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎನ್ನುವ ಆರೋಪ ಕೇಳಿಬಂದಿತ್ತು.

ಹೀಗಾಗಿ ಐಸಿಎಂಆರ್ ಸ್ಪಷ್ಟನೆ ನೀಡಿದ್ದು, ಕೋವಿಡ್ ಲಸಿಕೆಗೂ ಈ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.  ಜನರ ಜೀವನಶೈಲಿ, ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು, ವಂಶವಾಹಿ ಕಾರಣಗಳು, ಕೊರೊನಾ ನಂತರದ ತೊಡಕುಗಳು ಇದಕ್ಕೆ ಕಾರಣವಾಗಿರಬಹುದು. ಕೊರೊನಾ ಲಸಿಕೆಯಿಂದಲೇ ಸಾವು ಸಂಭವಿಸುತ್ತಿದೆ ಎಂದು ನೀಡುತ್ತಿರುವ ಹೇಳಿಕೆಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತವು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ತಜ್ಞರು ಪುನರುಚ್ಚರಿಸಿದ್ದಾರೆ.

ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಜೀವನಶೈಲಿ, ವಂಶವಾಹಿ, ಈ ಮೊದಲಿರುವ ಆರೋಗ್ಯ ಸಂಬಂಧಿ ಕಾಯಿಲೆಗಳು, ಕೋವಿಡ್ ನಂತರದ ಸಮಸ್ಯೆಗಳು ಸೇರಿದಂತೆ ವ್ಯಾಪಕ ಅಂಶಗಳು ಹಠಾತ್ ಸಾವು ಉಂಟಾಗಿರಬಹುದು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 18 ರಿಂದ 45 ರ ಪ್ರಾಯದ ಯುವಜನರಲ್ಲಿ ವಿವರಿಸಲಾಗದ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ತಿಳಿಯಲು ಐಸಿಎಂಆರ್ ಮತ್ತು ಎನ್‌ಸಿಡಿಸಿ ಅಧ್ಯಯನ ನಡೆಸುತ್ತಿವೆ. ಕೋವಿಡ್-19 ಲಸಿಕೆಯು ಯುವಕರಲ್ಲಿ ಹಠಾತ್ ಸಾವಿನ ಅಪಾಯ ಸೃಷ್ಟಿಸುವುದಿಲ್ಲ ಎಂದು ಸಂಶೋಧನೆಗಳು ನಿರ್ಣಯಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೀಗಾಗಿ, ಹೃದಯಾಘಾತದ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎಂಬ ಹೇಳಿಕೆಗಳು ಸುಳ್ಳು, ದಾರಿತಪ್ಪಿಸುವ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

 

Leave a Reply

Your email address will not be published. Required fields are marked *