ಕಾರ್ಕಳ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗ್ರಾಮ ಮಟ್ಟದ ಪ್ರಥಮ “ಗ್ಯಾರಂಟಿ ಅದಾಲತ್” ಕಾರ್ಯಕ್ರಮವು ಇನ್ನಾ ಗ್ರಾಮದಲ್ಲಿ ಗುರುವಾರ ನಡೆಯಿತು.
ಇನ್ನಾ ಮುದ್ದಾಣು ಮಹಾಲಿಂಗೇಶ್ವರ ದೇವಳದ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅದಾಲತನ್ನು ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಅದಾಲತ್ ನಡೆಸುವುದರಿಂದ ಯೋಜನೆಯ ಅನುಷ್ಠಾನಕ್ಕೆ ಇನ್ನಷ್ಟು ವೇಗ ದೊರಕಿದಂತಾಗುತ್ತದೆ, ಪ್ರತಿಯೊಬ್ಬ ಫಲಾನುಭವಿ ಕೂಡ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾದ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ನಿರ್ಮಾಣ ಮುಂತಾದ ಬೌಗೋಳಿಕ ಅಭಿವೃದ್ಧಿ ಮಾತ್ರವಲ್ಲ, ಬೌಗೋಳಿಕ ಅಭಿವೃದ್ಧಿಯ ಜೊತೆಜೊತೆಗೆ ಜನರ ಜೀವನಮಟ್ಟ ಸುಧಾರಣೆಯೂ ಅಭಿವೃದ್ಧಿಯಾಗಬೇಕು ಎಂದರು.
ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕಾರ್ಕಳ ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನವಾಗಿದ್ದು 96 % ಫಲಾನುಭವಿಗಳಿಗೆ ಇದರ ಪ್ರಯೋಜನ ದೊರೆಯುತ್ತಿದೆ ಎಂದರು.
ಇನ್ನಾ ಗ್ರಾಮ ಪಂಚಾಯತ್ ಸದಸ್ಯ ಮತ್ತು ಉಡುಪಿ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯ ದೀಪಕ್ ಕೋಟ್ಯಾನ್ ಇನ್ನಾ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಾತೃ ಹೃದಯ, ತಾಯಿ ತನಗೆ ಎಷ್ಟೇ ಕಷ್ಟವಾದರೂ ಮಕ್ಕಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾಳೆ, ಅದೇ ರೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡಜನರ ಹೊಟ್ಟೆ ಹಸಿವನ್ನು ನೀಗಿಸುವ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳನ್ನು ನೀಡುವ ಮೂಲಕ ತಾನು ತಾಯಿ ಹೃದಯದ ಮುಖ್ಯಮಂತ್ರಿ ಎಂದು ನಿರೂಪಿಸಿದ್ದಾರೆ ಎಂದರು.
ತಾಲೂಕು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಶಾಂತ್ ರಾವ್ ಮಾತನಾಡಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಇಲಾಖಾ ಮಟ್ಟದಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ, ಯುವನಿಧಿಗೆ ಸಂಬಂದಿಸಿದ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಗ್ಯಾರಂಟಿ ಅನುಷ್ಠಾನದ ವರದಿಗಳನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಿತಾ ಶೆಟ್ಟಿ, ಇನ್ನಾ ಮುದ್ದಾಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿವಾಕರ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಇನ್ನಾ ಗ್ರಾಮ ಪಂಚಾಯತ್ ಸದಸ್ಯ ಕುಶ.ಆರ್.ಮೂಲ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.