Share this news

ಕಾರ್ಕಳ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಭಿವೃದ್ಧಿ ಎನ್ನುವುದು ಕೇವಲ ಮರೀಚಿಕೆಯಾಗಿದೆ.
ಮಂಗಳವಾರ ತಡರಾತ್ರಿ ನಡೆದ ಎನ್ ಐಎ ದಾಳಿಯಲ್ಲಿ ಉಗ್ರರ ಜೊತೆ ಕೈಜೋಡಿಸಿದ ಆರೋಪದ ಮೇಲೆ ಕಾರಾಗೃಹದ ಪೊಲೀಸ್ ಅಧಿಕಾರಿಯನ್ನೇ ಬಂಧಿಸಿರುವುದು ಆತಂಕಕಾರಿ ಘಟನೆಯಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆಯ ದಕ್ಷತೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಗ್ರ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದವರ ಮೇಲೆ ಎನ್ ಐಎ ದಾಳಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರೇ ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹಾಗೂ ಕಾರಾಗೃಹದ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಭಯೋತ್ಪಾದಕರ ಜತೆ ಕೈ ಜೋಡಿಸಿ ಸದ್ದಿಲ್ಲದೇ ಉಗ್ರ ಚಟುವಟಿಕೆಗೆ ಪೋಷಣೆ ನೀಡಿದ್ದು ಆತಂಕಕಾರಿಯಷ್ಟೇ ಅಲ್ಲ, ಸರ್ಕಾರದ ‘ ಟೆರರ್ ಸಾಫ್ಟ್ ಕಾರ್ನರ್’ ಧೋರಣೆಗೆ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕನಿಗೆ ಗೃಹ ಇಲಾಖೆಯ ಸಿಬ್ಬಂದಿಯೇ ಸಹಕಾರ ಕೊಡುತ್ತಿದ್ದರೂ ರಾಜ್ಯದ ಭಯೋತ್ಪಾದಕ ನಿಗ್ರಹ ದಳ ಕಡಲೆಪುರಿ ತಿನ್ನುತ್ತಿತ್ತೇ ?
ಸಿಎಂ ಹಾಗೂ ಗೃಹ ಸಚಿವರ ಕಣ್ಮುಂದೆಯೇ ಇಂತಹ ಆಘಾತಕಾರಿ ವಿದ್ಯಮಾನ ನಡೆದಿದ್ದರೂ ರಾಜ್ಯ ಪೊಲೀಸರು ಕೈಕಟ್ಟಿ ಕುಳಿತಿದ್ದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಾಳಗದಲ್ಲಿ ರಾಜ್ಯವನ್ನು ಭಯೋತ್ಪಾದಕರ ಅಡಗುತಾಣ ಮಾಡಬೇಡಿ, ದೇಶದ ಭದ್ರತೆ, ನಾಗರಿಕರ ಸುರಕ್ಷತೆಯ ಕುರಿತು ಕಿಂಚಿತ್ತಾದರೂ ಜವಾಬ್ದಾರಿ ತೋರಬೇಕು ಎಂದು ಸುನಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ಜತೆಗಿನ ನಂಟು, ಹಿಂದೂ ಕಾರ್ಯಕರ್ತರ ಹತ್ಯೆ ಸೇರಿದಂತೆ ಜಿಹಾದಿಗಳ ಪ್ರತ್ಯಕ್ಷ , ಪರೋಕ್ಷ ಕೈವಾಡವಿರುವ ಪ್ರಕರಣಗಳನ್ನು ಬೇಧಿಸುವುದಕ್ಕೆ ರಾಜ್ಯ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ ?ಪೊಲೀಸರಿಗೆ ಸರ್ಕಾರದ ಒತ್ತಡವಿದೆಯೇ? ಪ್ರತೀ ಬಾರಿಯೂ ಎನ್ ಐಎ ಅಧಿಕಾರಿಗಳು ಈ ಷಡ್ಯಂತ್ರ ಬಯಲಿಗೆಳೆಯುತ್ತಿದ್ದಾರೆ ಎಂದರೆ ಸರ್ಕಾರ ರಾಜ್ಯ ಪೊಲೀಸರ ಕೈ ಕಟ್ಟಿ ಹಾಕಿದೆಯೇ ? ರಾಜ್ಯ ಭಯೋತ್ಪಾದನಾ ನಿಗ್ರಹ ದಳವನ್ನು ಸರ್ಕಾರ ಯಾವ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬುಡಮೇಲು ಕೃತ್ಯದಲ್ಲಿ ಭಾಗಿಯಾದ ನಕ್ಸಲರಿಗೆ ಸಿಎಂ ಸಿದ್ದರಾಮಯ್ಯನವರ ಗೃಹ ಕಚೇರಿಯಲ್ಲೇ ಶರಣಾಗತಿ ಪ್ಯಾಕೇಜ್ ನೀಡಿ ನಕ್ಸಲ್ ನಿಗ್ರಹ ಪಡೆಯ ಬಲವನ್ನು ಕಡಿಮೆ ಮಾಡಿದಂತೆ ಭಯೋತ್ಪಾದಕ ನಿಗ್ರಹ ಹಾಗೂ ಆಂತರಿಕ ಭದ್ರತಾ ದಳವನ್ನೂ (ಐಎಸ್ ಡಿ) ಸಿದ್ದರಾಮಯ್ಯನವರು ನಿಷ್ಕ್ರಿಯಗೊಳಿಸಿದ್ದಾರೆಯೇ ? ತಮಗೆ ಮತ ನೀಡಿದ ಬಾಂಧವರು ಸಿಟ್ಟಾಗುತ್ತಾರೆ ಎಂಬ ಕಾರಣಕ್ಕೆ ಬಾಂಬ್ ಸ್ಫೋಟಿಸುವ ಆರೋಪಿಗಳಿಗೆ ಕಾರಾಗೃಹದಲ್ಲೂ ಸೌಲಭ್ಯ ಒದಗಿಸಲಾಗುತ್ತಿದೆಯೇ ? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಕಾರ್ಯಕರ್ತರನ್ನು ಮಟ್ಟ ಹಾಕುವುದಕ್ಕಾಗಿ “ದ್ವೇಷಭಾಷಣ” ಎಂಬಿತ್ಯಾದಿ ಬಾಬರ್ ಕಾಯ್ದೆ ಜಾರಿಗೆ ಹವಣಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗೃಹ‌‌ ಇಲಾಖೆಯ ಕಣ್ಣೆದುರೇ ನಡೆಯುವ ಉಗ್ರಕೃತ್ಯ ಕಾಣುವುದಿಲ್ಲವೇ ? ಕೇವಲ ಓಲೈಕೆಗಾಗಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ

ವಿ

 

 

Leave a Reply

Your email address will not be published. Required fields are marked *