ಶಿವಮೊಗ್ಗ: ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ರಾಜ್ಯದ ಅತೀ ಉದ್ದದ ಸೇತುವೆಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಿದ್ದಾರೆ. ಈ ಮೂಲಕ ಶರಾವತಿ ಹಿನ್ನೀರಿನ ಜನರ ದಶಕಗಳ ಕನಸು ನನಸಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ್ ಜೋಶಿ ಅವರು ಶರಾವತಿ ಹಿನ್ನೀರಿಗೆ ಬಾಗಿನ ಅರ್ಪಿಸುವ ಮೂಲಕ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಸೇತುವೆ ಎಂದು ನಾಮಕರಣ ಮಾಡಲಾಗಿದೆ. ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದ್ದೆ. ಇದೀಗ, ನಾನೇ ಉದ್ಘಾಟನೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೂತನ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ ಆಗಲಿದೆ ಎಂದು ತಿಳಿಸಿದರು.
ಸೇತುವೆ ಲೋಕಾರ್ಪಣೆ ಕಾರ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪರಿಷತ್ ಸದಸ್ಯ ಧನಂಜಯ ಸರ್ಜಿ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾದ ಬಹುನಿರೀಕ್ಷಿತ ಕೇಬಲ್-ಸ್ಟೇಡ್ ಸೇತುವೆಯು ರಾಜ್ಯದಲ್ಲಿಯೇ ಅತಿ ಉದ್ದವಾಗಿದೆ ಮತ್ತು ದೇಶದಲ್ಲಿಯೇ ಎರಡನೇ ಅತಿ ಉದ್ದವಾದ ಸೇತುವೆಯಾಗಿದೆ. 2.44 ಕಿ.ಮೀ.: ಸಿಂಗದೂರು ಸೇತುವೆಯ ಒಟ್ಟು ಉದ್ದ 16 ಮೀ. ಸೇತುವೆ ಹೊಂದಿರುವ ಅಗಲದ ದ್ವಿಪಥದ ಸೇತುವೆ ನಿರ್ಮಾಣಕ್ಕೆ ಒಟ್ಟು 473 ಕೋಟಿ ರೂ ವೆಚ್ಚವಾಗಿದೆ.
ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ಹಲವಾರು ಹಳ್ಳಿಗಳಿಗೆ ಹಾಗೂ ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆಯಂತಹ ಜನಪ್ರಿಯ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. 70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್ ಕಟ್ಟಿದಾಗ ಅದರ ಹಿನ್ನೀರಿನಿಂದ ಸಾಗರ ತಾಲೂಕಿನ ಶರಾವತಿ ಕಣಿವೆ 2 ಭಾಗವಾಗಿ ವಿಭಜನೆಯಾಯಿತು.ಇದರಿಂದ ನದಿಯ ಒಂದು ಭಾಗದಲ್ಲಿ ಉಳಿದವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿತ್ತು. ಅಲ್ಲಿನ ಜನ 2 ಕಿಮೀ ಅಂತರದ ನದಿ ದಾಟಲು ವ್ಯವಸ್ಥೆ ಇಲ್ಲದೇ ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80 ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಈ ಯೋಜನೆಗೆ ಮಾರ್ಚ್ 2019 ರಲ್ಲಿ ಅನುಮೋದನೆ ನೀಡಿತು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಕೇವಲ ಏಳು ವರ್ಷಗಳಲ್ಲಿ ಸೇತುವೆ ನಿರ್ಮಾಣಗೊಂಡಿದೆ ಪೂರ್ಣಗೊಂಡಿದೆ. ಇದನ್ನು ಮಧ್ಯಪ್ರದೇಶದ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ನಿರ್ಮಾಣ ಮಾಡಿದೆ.