ಕಾರ್ಕಳ:ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ಕಂಚಿನದಲ್ಲ ಬದಲಾಗಿ ಹಿತ್ತಾಳೆ ಪ್ರತಿಮೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಪೊಲೀಸರ ತನಿಖೆಯಿಂದ ಫೈಬರ್ ಪ್ರತಿಮೆ ಎನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ.
ಕ್ರಿಶ್ ಆರ್ಟ್ ವರ್ಲ್ಡ್ ಸಂಸ್ಥೆಯ ಮಾಲೀಕ ಕೃಷ್ಣ ನಾಯಕ್ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕಿನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಗುತ್ತಿಗೆ ಪಡೆದುಕೊಂಡು ಕಾಮಗಾರಿ ನಡೆಸಿದ್ದರು.ಆದರೆ ಪ್ರತಿಮೆಯ ಅಸಲಿಯತ್ತು ಕುರಿತು ಕಾಂಗ್ರೆಸ್ ಮುಖಂಡ ಕೃಷ್ಣ ಶೆಟ್ಟಿ ಬಜಗೋಳಿ ಪ್ರತಿಮೆಯ ಶಿಲ್ಪಿ ಕೃಷ್ಣ ನಾಯಕ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಯನ್ನು ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣದ ಕುರಿತು ಸುಧೀರ್ಘ ತನಿಖೆ ನಡೆಸಿದ ಪೊಲೀಸರು ಇದೀಗ ತನಿಖಾ ವರದಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯಕ್ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಮೆ ನಿರ್ಮಾಣದ ಕುರಿತಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಕಾರ್ಯಾದೇಶದಲ್ಲಿರುವ ಷರತ್ತುಗಳನ್ನು ಪಾಲಿಸಿಲ್ಲ. ಪ್ರತಿಮೆ ಗಟ್ಟಿಗೊಳಿಸುವ ನೆಪದಲ್ಲಿ 2023ರ ಅ. 12ರಂದು ಪರಶುರಾಮ ಮೂರ್ತಿಯ ಸೊಂಟದ ಮೇಲ್ಬಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಉಡುಪಿ ತಾಲೂಕು ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್ನಲ್ಲಿರಿಸಿ, ಬಳಿಕ ಮೂರ್ತಿಯ ಸೊಂಟದಿಂದ ಮೇಲ್ಬಾಗವನ್ನು ಶಿಲ್ಪಿ ಕೃಷ್ಣ ನಾಯಕ್ ಅವರಿಗೆ ಹಸ್ತಾಂತರ ಮಾಡಲಾಗಿತ್ತು.ಆದರೆ ಕೃಷ್ಣ ನಾಯಕ್ ಈ ಪ್ರತಿಮೆಯ ಭಾಗಗಳನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ತಪ್ಪು ಮಾಹಿತಿಯನ್ನು ನೀಡಿರುತ್ತಾರೆ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯಕ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರು ವಿರುದ್ಧ ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿದ್ದಾರೆ ಎಂದು 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.