Share this news

ಕಾರ್ಕಳ:ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಈವರೆಗೂ ಮಾಡಿಕೊಂಡು ಬಂದ ಆರೋಪಗಳೆಲ್ಲವೂ ಸುಳ್ಳಾಗಿವೆ. ಕಾರ್ಕಳ ಕಾಂಗ್ರೆಸ್ ನಡೆಸಿದ ಹತಾಶ ಪ್ರಯತ್ನಕ್ಕೆ ರಾಜ್ಯ ನಾಯಕರು ಪರಾಮರ್ಶೆ ನಡೆಸದೇ ಮಾಡಿದ ಅಭಿಯಾನಕ್ಕೆ ಸೋಲಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಪಕ್ಷಗಳ ಮೇಲೆ ವಿನಾಕಾರಣ ಆರೋಪ ಮತ್ತು ತನಿಖೆ ನಡೆಸುವ ಪ್ರವೃತ್ತಿ ಹೆಚ್ಚಿದ್ದು, ಫೈಬರ್ ಪ್ರತಿಮೆ ವಿಚಾರವು ಕೂಡಾ ಆ ಪ್ರಯತ್ನದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ನನ್ನ ಕನಸಿನ ಯೋಜನೆಯಾಗಿತ್ತು. ಇಡೀ ದಕ್ಷಿಣ ಭಾರತದ ಶ್ರೇಷ್ಠ ಪ್ರವಾಸಿ ತಾಣವಾಗಿ ಇದನ್ನು ಅಭಿವೃದ್ಧಿಪಡಿಸುವ ಗುರಿ ನಮ್ಮದಾಗಿತ್ತು. ಆದರೆ ಹೊಟ್ಟೆ ಉರಿಗೆ ಮದ್ದಿಲ್ಲ ಎಂಬಂತೆ ಕಾಂಗ್ರೆಸ್ ನಾಯಕರ ಅಸೂಯೆಗೆ ಪ್ರವಾಸೋದ್ಯಮ ಕೇಂದ್ರವಾಗಬೇಕಿದ್ದ ಪರಶುರಾಮ ಥೀಮ್ ಆಹಾರವಾಗಿದೆ.ಪುತ್ಥಳಿ ಲೋಹದ್ದಲ್ಲ, ಫೈಬರ್’ನದ್ದು ಎಂದು ಸುಳ್ಳು, ಕಪೋಲಕಲ್ಪಿತ ಕಟ್ಟುಕತೆಯನ್ನು ಎರಡು ವರ್ಷಗಳ ಕಾಲ ವ್ಯಾಪಕವಾಗಿ ಅಪಪ್ರಚಾರ ನಡೆಸಿದವರು ಇಂದು ಉತ್ತರ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಮೆಯ ನಿರ್ಮಾಣದಲ್ಲಿ ಲೋಪವಾದರೆ ತನಿಖೆ ನಡೆಸಿ ಆದರೆ ಅಪಪ್ರಚಾರ ಬೇಡ ಎಂದು ಪ್ರಾರಂಭದಿಂದಲೂ ನಾನು ವಾದಿಸಿದ್ದೆ.ಈ ಕುರಿತು ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದೆ. ಆದರೆ ಸರ್ಕಾರ ಈ ವಿಚಾರವನ್ನು ಜೀವಂತವಾಗಿಡುವುದಕ್ಕೆ ಪ್ರಯತ್ನಿಸಿತು. ಮುಂದಿನ ಚುನಾವಣೆವರೆಗೂ ಜೀವಂತವಾಗಿಡುವಂತೆ ಡಿಸಿಎಂ ಅವರೇ ಹೇಳಿರುವ ಅರ್ಥವೇನು ? ಎಂದು ಪ್ರಶ್ನಿಸಿದರು.
ಹೀಗಾಗಿ ಇದು ಕೇವಲ ನನ್ನ ವಿರುದ್ಧ ಮಾತ್ರವಲ್ಲ, ಬಿಜೆಪಿ ವಿರುದ್ಧ ನಡೆಸಿದ ವ್ಯವಸ್ಥಿತ ಷಡ್ಯಂತ್ರವಾಗಿತ್ತು. ಈಗಲಾದರೂ ಸರ್ಕಾರ ಸುಳ್ಳು ಆರೋಪ, ಕಟ್ಟು ಕತೆ ನಿಲ್ಲಿಸಿ ಥೀಂ ಪಾರ್ಕನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲು ಸಹಕರಿಸಬೇಕು. ಸರ್ಕಾರಕ್ಕೆ ಪರಶುರಾಮ ಥೀಂ ಪಾರ್ಕ್ ಅಭಿವೃದ್ಧಿಗೆ ಸಹಕರಿಸುವ ಮನಸಿಲ್ಲದಿದ್ದರೆ ಭಿಕ್ಷೆ ಬೇಡಿಯಾದರೂ ಅಭಿವೃದ್ಧಿ ಮಾಡುತ್ತೇನೆಂಬ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಸುನಿಲ್ ತಿರುಗೇಟು‌ ನೀಡಿದ್ದಾರೆ.

 

 

Leave a Reply

Your email address will not be published. Required fields are marked *