ಹೆಬ್ರಿ.ಜು.18: ದಲಿತರ ಭೂಮಿ ಮತ್ತು ವಸತಿ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹೆಬ್ರಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಹಕ್ಕೊತ್ತಾಯದ ಪ್ರತಿಭಟನೆ ನಡೆಯಿತು.
ಹೆಬ್ರಿ ಶಾಖೆಯ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಕೆ. ದೇವ್, ರಾಘವ ಕುಕ್ಕುಜೆ, ಅಣ್ಣಪ್ಪ ನಕ್ರೆ, ಹೆಬ್ರಿ ತಾಲೂಕು ಸಂಘಟನಾ ಸಂಚಾಲಕ ಪ್ರದೀಪ್ ಮುದ್ರಾಡಿ, ಶಶಿಧರ್ ವರಂಗ ಮತ್ತು ರಾಮ ಬೆಳಂಜೆ ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು:
ಉಡುಪಿ ಜಿಲ್ಲೆಯ ಡಿಸಿ ಮನ್ನಾ ಭೂಮಿಗಳನ್ನು ಅರ್ಹ ಪರಿಶಿಷ್ಟ ಜಾತಿ/ಪಂಗಡ ಭೂರಹಿತರಿಗೆ ಮರು ಹಂಚಿಕೆ ಮಾಡಬೇಕು.
ಅಕ್ರಮ ಸಕ್ರಮ ಸಮಿತಿಗಳು: ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಡಿ ಲಭ್ಯವಿರುವ ಭೂಮಿಯ ಕನಿಷ್ಠ ಶೇಕಡಾ 50% ದಲಿತ ಸಮುದಾಯಗಳಿಗೆ ಮೀಸಲಿಡಬೇಕು.
ಮುಡಿಯನೂರು ಗ್ರಾಮ: ಸರ್ವೆ ನಂ. 371 ಮತ್ತು 384ರಲ್ಲಿ ಹಲವಾರು ದಲಿತ ಕುಟುಂಬಗಳು ಪೂರೈಕೆ ಅರ್ಜಿಗಳನ್ನು ಸಲ್ಲಿಸಿದ್ದರೂ ಭೂಮಿ ಮಂಜೂರಾಗಿಲ್ಲ. ನಕಲಿ ದಾಖಲೆಗಳನ್ನು ರದ್ದುಪಡಿಸಿ ಈ ಜಮೀನನ್ನು ಆ ಕುಟುಂಬಗಳಿಗೆ ಮಂಜೂರು ಮಾಡಬೇಕು.
ಕೊರವೇನೂರು ಗ್ರಾಮ: 2 ಎಕ್ರೆ ಜಮೀನನ್ನು ರೈತರಿಗೆ ನಿವೇಶನಕ್ಕಾಗಿ ಮತ್ತು 1 ಎಕ್ರೆ ಜಮೀನನ್ನು ದಲಿತರಿಗೆ ಸನ್ಮಾನಕ್ಕಾಗಿ ಮೀಸಲಿಡಬೇಕು.
ಜಮ್ಮನಹಳ್ಳಿ (ಮುಳಬಾಗಿಲು ತಾಲೂಕು): ಸರ್ವೆ ನಂ. 6ರಲ್ಲಿ ಅಕ್ರಮ ಲೇಔಟ್ ಆಗಿರುವ ಹುಲ್ಲುಗಾವಲು ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಸರ್ವೆ ನಂ. 103ರ ಗೋಮಾಳ ಜಮೀನಿನ ನಕಲಿ ದಾಖಲೆಗಳನ್ನು ರದ್ದುಗೊಳಿಸಿ ಹುಲ್ಲುಗಾವಲು ಉದ್ದೇಶಕ್ಕಾಗಿ ಕಾಯ್ದಿರಿಸಬೇಕು.