ವರದಿ,ಚಿತ್ರಕೃಪೆ: ಸಾಯಿಪ್ರಕಾಶ್ ಸ್ಟುಡಿಯೋ, ಮುನಿಯಾಲು
ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುಟ್ಲುಪಾಡಿಯಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಸಲಗದ ಓಡಾಟ ಕಂಡುಬಂದಿದ್ದು, ಸ್ಥಳೀಯ ನಾಗರಿಕರಲ್ಲಿ ಭಯದ ವಾತಾವರಣ ಮೂಡಿಸಿದೆ.
ಮುಟ್ಲುಪಾಡಿ ಮೂಡುದರ್ಖಾಸು ನಾಗಯ್ಯ ನಾಯ್ಕ್ ಎಂಬವರ ಅಡಿಕೆ ಹಾಗೂ ಬಾಳೆ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಿಕೆ ಹಾಗೂ ಬಾಳೆ ಕೃಷಿ ಧ್ವಂಸಗೊಳಿಸಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಕಾರ್ಕಳ ತಾಲೂಕಿನ ಶಿರ್ಲಾಲು ಹಾಗೂ ಕುಂದಾಪುರ ತಾಲೂಕಿನ ಸಿದ್ದಾಪುರ ಭಾಗದಲ್ಲಿ ಆನೆ ಕಾಣಿಸಿಕೊಂಡು ಭಾರೀ ಆವಾಂತರ ಸೃಷ್ಟಿಯಾಗಿತ್ತು. ಇದೀಗ ಮುಟ್ಲುಪಾಡಿಯ ದಟ್ಟ ಕಾಡಿನ ಗ್ರಾಮದೊಳಗೆ ಒಂಟಿ ಸಲಗ ದಾಳಿಯಿಟ್ಟಿದ್ದು ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.ಇದಲ್ಲದೇ ಶಾಲಾ ಮಕ್ಕಳು ಹಾಗೂ ಕೃಷಿ ಚಟುವಟಿಕೆ ನಡೆಸುವ ರೈತರು ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಸುದ್ದಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು,ಆನೆ ಓಡಾಟ ಹಾಗೂ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಜನರು ಎಚ್ಚರಿಕೆಯಿಂದ ಓಡಾಡುವಂತೆ ಸೂಚಿಸಿದ್ದಾರೆ.