ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವಿರುದ್ಧ ನಡೆದ ಪ್ರತಿಭಟನೆ ಇದೀಗ ಕಾರ್ಯಕರ್ತರ ಕಲಹಕ್ಕೆ ಕಾರಣವಾಗಿದ್ದು, ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ವೈಯಕ್ತಿಕ ಕಿತ್ತಾಟದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಬೋಳ ಗ್ರಾಮದ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ರೊನಾಲ್ಡ್ ಅಲ್ಫೋನ್ಸ್ (51) ಎಂಬವರು ಜು.25 ರಂದು ಬೆಳಗ್ಗೆ 11:30ರ ಸುಮಾರಿಗೆ ತಮ್ಮ ಬೈಕಿನಲ್ಲಿ ಬೋಳ ಬೋಪಾಡಿ 5 ಸೆಂಟ್ಸ್ ಬಳಿಯ ಹೋಗುತ್ತಿದ್ದ ವೇಳೆ ಪಂಚಾಯತ್ ಸದಸ್ಯ ಬೋಳದ ಕಿರಣ್ ಅವರು ರೊನಾಲ್ಡ್ ಅಲ್ಫೋನ್ಸ್ ಅವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತ ಹಾಗೂ ಪಂಚಾಯತ್ ಸದಸ್ಯ ಕಿರಣ್ ಅವರು ರೊನಾಲ್ಡ್ ಅಲ್ಫೋನ್ಸ್ ವಿರುದ್ಧ ದೂರು ನೀಡಿದ್ದು, ಕಿರಣ್ ಅವರು ಜು.25 ರಂದು ಶುಕ್ರವಾರ ದತ್ತಗುರು ಜನರಲ್ ಸ್ಟೋರ್ ನಲ್ಲಿ ಟೀ ಕುಡಿದು ವಾಪಾಸು ಬರುತ್ತಿದ್ದಾಗ ಆರೋಪಿ ರೋನಿ ಅಲ್ಫೋನ್ಸಾ ಎಂಬವರು ತನ್ನ ವಾಹನ ತಡೆದು ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಿದ್ದು, ಈ ಪ್ರಕರಣದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.