ನವದೆಹಲಿ: ಅನಾಥ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಉಚಿತ ಶಿಕ್ಷಣ ನೀಡುವ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಈ ಸಂಬAಧ 4 ವಾರಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ನ್ಯಾಯಾಲಯ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ತಮ್ಮಲ್ಲಿ ಎಷ್ಟು ಅನಾಥ ಮಕ್ಕಳಿದ್ದಾರೆ ಮತ್ತು ಅವರಲ್ಲಿ ಎಷ್ಟು ಮಂದಿ ಶಾಲೆಗೆ ಪ್ರವೇಶ ಪಡೆದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಮೀಕ್ಷೆ ನಡೆಸುವಂತೆ ನ್ಯಾಯಾಲಯವು ರಾಜ್ಯಗಳಿಗೆ ಸೂಚಿಸಿದೆ.
ಅನಾಥರು, ದುರ್ಬಲ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಕೋಟಾದ ಅಡಿಯಲ್ಲಿ ಉಚಿತ ಶಿಕ್ಷಣವನ್ನು ಪಡೆಯಲು ಅವಕಾಶ ನೀಡಲು ಅಧಿಸೂಚನೆಗಳನ್ನು ಹೊರಡಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಂಬAಧ ವಕೀಲ ಪೌಲೋಮಿ ಪವನ್ ಶುಕ್ಲಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ದುರ್ಬಲ ವರ್ಗಗಳ ಮಕ್ಕಳಿಗೆ ನಿಗದಿಪಡಿಸಿದ ಶೇಕಡಾ 25 ರ ಕೋಟಾದ ಅಡಿಯಲ್ಲಿ ಶಾಲೆಗಳಲ್ಲಿ ಅನಾಥ ಮಕ್ಕಳಿಗೆ ಪ್ರವೇಶ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ದೆಹಲಿ, ಗುಜರಾತ್, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಮೇಘಾಲಯ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದರು. ಹೆಚ್ಚಿನ ರಾಜ್ಯಗಳ ಬಳಿ ಈ ನಿಟ್ಟಿನಲ್ಲಿ ಸೂಕ್ತ ದತ್ತಾಂಶವೂ ಇಲ್ಲ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಅರ್ಜಿಯನ್ನು ಮಹತ್ವದ್ದಾಗಿದೆ ಎಂದು ಬಣ್ಣಿಸಿತು. ಸಮಾಜದ ಅತ್ಯಂತ ನಿರ್ಗತಿಕ ವರ್ಗಗಳಲ್ಲಿ ಒಂದಕ್ಕೆ ಸಂಬAಧಿಸಿದ ಪ್ರಶ್ನೆಯನ್ನು ಅರ್ಜಿಯು ಎತ್ತುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. ಈ ಮಕ್ಕಳಿಗೆ ಪ್ರೀತಿ ಮತ್ತು ರಕ್ಷಣೆ ಬೇಕು. ಕೆಲವು ರಾಜ್ಯಗಳು ಅನಾಥ ಮಕ್ಕಳನ್ನು ಆರ್ಟಿಇ ಕಾಯ್ದೆಯ ಸೆಕ್ಷನ್ 12(1)( ಸಿ) ನಲ್ಲಿ ಸೇರಿಸಿವೆ . ಇತರ ರಾಜ್ಯಗಳು ಸಹ 4 ವಾರಗಳಲ್ಲಿ ಅಂತಹ ಅಧಿಸೂಚನೆಯನ್ನು ಹೊರಡಿಸಬೇಕು. ಎಲ್ಲಾ ರಾಜ್ಯಗಳು ಶಾಲೆಗಳಲ್ಲಿ ಅನಾಥ ಮಕ್ಕಳ ಪ್ರವೇಶದ ಕುರಿತು ಸಮೀಕ್ಷೆ ನಡೆಸಿ ಅದರ ಡೇಟಾವನ್ನು ಸಹ ಸಲ್ಲಿಸಬೇಕು ಎಂದು ಹೇಳಿದೆ.