ಕಾರ್ಕಳ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಎಸ್ ಆರ್ ಎಲ್ ಎಂ ತರಬೇತುದಾರ ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ನಮ್ಮ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ನಮ್ಮ ಜವಾಬ್ದಾರಿ ‘ ವಿಷಯದ ಕುರಿತು ಉಪನ್ಯಾಸ ನೀಡಿದರು. ಪರಿಸರದ ಕುರಿತು ಮಾನವರ ಬೇಜವಾಬ್ದಾರಿ ನಡೆಯೆ ಪರಿಸರ ವಿನಾಶಕ್ಕೆ ಕಾರಣವಾಗಿದೆ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ, ನಮ್ಮ ನಮ್ಮನ್ನು ಶುಚಿ- ಸೌಂದರ್ಯವಾಗಿ ಇಟ್ಟುಕೊಂಡಂತೆ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು, ಇದಕ್ಕಾಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬೇಕಾಗಿಲ್ಲ, ನಮ್ಮ ನಮ್ಮ ಮನೆಗಳಲ್ಲಿಯೇ ಕಸದ ನಿರ್ವಹಣೆ, ಏಕ ಬಳಕೆ ವಸ್ತುಗಳನ್ನು ಬಳಸದೇ ಇರುವುದು, ಟೆಟ್ರಾ ಪ್ಯಾಕೇಟ್ ಗಳನ್ನು ಬಳಸದೇ ಇರುವುದು ಇಂತಹದ್ದೇ ಸಣ್ಣ ಸಣ್ಣ ಚಟುವಟಿಕೆಗಳಿಂದ ನಾವು ನಮ್ಮ ಪರಿಸರವನ್ನು ಉಳಿಸಿಕೊಳ್ಳಬಹುದು, ಜೊತೆಗೆ ಎಲ್ಲರಲ್ಲೂ ‘ನನ್ನ ತ್ಯಾಜ್ಯ ನನ್ನ ಜವಾಬ್ದಾರಿ’ ಎನ್ನುವ ಪರಿಕಲ್ಪನೆ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ಅಭಿವೃದ್ದಿ ಎಂದರೆ ಕೇವಲ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ಮಾತ್ರವಲ್ಲ, ಮುಂದಿನ ತಲೆಮಾರಿಗೆ ಈ ಪರಿಸರ ಮತ್ತು ನಾವು ಪ್ರಕೃತಿಯಿಂದ ಪಡೆದ ಸೌಲಭ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದೂ ಅಭಿವೃದ್ದಿ ಎಂದು ತಿಳಿಸಿದರು. ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವೂ ಈ ಕುರಿತು ಯುವ ಜನತೆಗೆ ಅರಿವು ಮೂಡಿಸಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್ ಉಪಸ್ಥಿತರಿದ್ದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ ಸಂಯೋಜಕಿ ಸೌಮ್ಯ ಎಂ.ಜೆ ಸ್ವಾಗತಿಸಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ ಕಾರ್ಯದರ್ಶಿ ಕುಮಾರಿ ಶ್ರೀನಿಧಿ ಮೆಂಡನ್ ವಂದಿಸಿದರು, ಕುಮಾರಿ ಲೀಶಾ ಕಾರ್ಯಕ್ರಮ ನಿರೂಪಿಸಿದರು.