Share this news

ಬೆಂಗಳೂರು(ವಿಧಾನಸಭೆ): ಬಾಲ್ಯವಿವಾಹ ಸಾಮಾಜಿಕ ಪೀಡುಗಾಗಿದ್ದು, ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಮಳೆಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕೆಲವು ಸಮುದಾಯ ಮತ್ತು ಪಂಗಡಗಳಲ್ಲಿ ಆಚರಣೆಯಲ್ಲಿರುವ ಸಾಮಾಜಿಕ ಪದ್ಧತಿಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಇದರಿಂದಾಗಿ ಬಾಲಗರ್ಭಿಣಿಯರ ಸಂಖ್ಯೆ ಹೆಬ್ಬಾಗುತ್ತಿದೆ, ಬಾಲ್ಯ ವಿವಾಹಗಳ ಸಂಖ್ಯೆ ಹೆಬ್ಬಾಗುತ್ತಿರುವುದರಿಂದ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.

ಬಾಲ್ಯವಿವಾಹಗಳನ್ನು ತಡೆಗಟ್ಟಲು ಸರ್ಕಾರ ಈಗಾಗಲೇ ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ (ಸಿಡಬ್ಲ್ಯುಸಿ) ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 4 ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಸಿಡಬ್ಲ್ಯುಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಯೂ ದಿನ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಗುವಿನ ಬಗ್ಗೆ ಯಾವುದೇ ಸಮಯದಲ್ಲಿ ಕರೆ ಬಂದರೂ ತಕ್ಷಣ ಮಗುವನ್ನು ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕಾ ಪಡೆ!

ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಪೊಲೀಸ್ ಒಳಗೊಂಡ ಅಕ್ಕಾ ಪಡೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವರು ಉತ್ತರಿಸಿದರು. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗಸ್ಟ್ 15 ರಿಂದ ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅಕ್ಕಾ ಪಡೆ ಆರಂಭಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *