ಉಡುಪಿ: ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ರಾಮನ ನಡೆ ಕೃಷ್ಣನ ನುಡಿ ನಮ್ಮದಾಗಬೇಕು. ವಿದ್ಯಾರ್ಥಿಗಳು ಕಷ್ಟದ ಸಂದರ್ಭದಲ್ಲಿ ಕೈಹಿಡಿದ ಸಮಾಜದ ಋಣವನ್ನು, ಮುಂದೆ ವಿದ್ಯಾಭ್ಯಾಸದಲ್ಲಿ ಶ್ರೇಷ್ಠತೆಯ ಸಾಧನೆಗೈದು ಉದ್ಯೋಗ ಅಥವಾ ಉದ್ಯಮದ ಮೂಲಕ ಸಮಾಜಕ್ಕೆ ಹಿಂದುರುಗಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಖ್ಯಾತ ಲೆಕ್ಕಪರಿಶೋಧಕ ಹಾಗೂ ದಾನಿಗಳಾದ ಸಿ.ಎ.ಕಮಲಾಕ್ಷ ಕಾಮತ್ ಹೇಳಿದರು.
ಅವರು ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ಆಡಿಟೋರಿಯಂನಲ್ಲಿ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಪೀಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಭ್ಯಾಸಕ್ಕೆ ನೀಡುವ ನೆರವು ಸಮಾಜದ ಏಳಿಗೆಗೆ ವಿನಿಯೋಗವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಉದ್ಯೋಗ ಪಡೆಯುವಲ್ಲಿ ಮಾತ್ರ ತೃಪ್ತಿ ಪಟ್ಟುಕೊಳ್ಳದೆ ಉದ್ಯಮಶೀಲತೆ ಮೂಲಕ ನೂರಾರು ಜನರಿಗೆ ಉದ್ಯೋಗ ದೊರಕಿಸುವ ಕಾರ್ಯಕ್ಕೆ ಮನ ಮಾಡಬೇಕು ಎಂದರು.
ಸಾಗರದ ಉದ್ಯಮಿ ಶಿವಾನಂದ ಭಂಡಾರ್ಕರ್ ಮಾತನಾಡಿ, ಕ್ರೀಡಾ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಶ್ರಮ ಪಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಮತ್ತು ವಿಶೇಷ ತರಬೇತಿಗೆ ತಗಲುವ ಖರ್ಚು ವೆಚ್ಚಗಳನ್ನು ಭರಿಸಲು ಜಿಎಸ್ಬಿ ಹಿತರಕ್ಷಣಾ ವೇದಿಕೆಯ ಮೂಲಕ ಸಹಕರಿಸುವುದಾಗಿ ಘೋಷಿಸಿದರು.
ಬೆಂಗಳೂರಿನ ಉದ್ಯಮಿ ಬೇಲಾಡಿ ಜಯವಂತ ಕಾಮತ್, ಶಿವಮೊಗ್ಗದ ಸಾಮಾಜಿಕ ಮುಂದಾಳು ಮಹಿಳಾ ಉದ್ಯಮಿ ರೀತಾಪ್ರಕಾಶ್ ಪ್ರಭು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮತ್ತು ಉಡುಪಿಯ ಖ್ಯಾತ ಸರ್ಜನ್ ಸುರೇಶ್ ಶೆಣೈ ಯವರಿಂದ ಶೈಕ್ಷಣಿಕ ಪ್ರೇರಣ ಕಾರ್ಯಗಾರ ನಡೆಯಿತು.
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಆರಂಭದ ದಿನಗಳಿಂದ ಮಾರ್ಗದರ್ಶಕರಾಗಿರುವ ಬೆಂಗಳೂರಿನ ಹಿರಿಯ ಸಾಮಾಜಿಕ ಕಾರ್ಯಕರ್ತೆ ಸತ್ಯಭಾಮ ಕಾಮತ್ ಅವರಿಗೆ ವಿಶೇಷ ಅಭಿನಂದನೆ ಮತ್ತು ಮಾತೃವಂದನ ಗೌರವ ಪುರಸ್ಕಾರ ನಡೆಯಿತು.
ಇದೇ ಸಂದರ್ಭದಲ್ಲಿ ವರುಣ್ ಶೆಣೈ ಮತ್ತು ವೈಷ್ಣವ್ ಶೆಣೈ ಯವರಿಂದ ನಿರ್ಮಾಣಗೊಂಡ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸೋಷಿಯಲ್ ಮೀಡಿಯ/ವೆಬ್ಸೈಟ್ಗೆ ಚಾಲನೆ ನೀಡಲಾಯಿತು.
ಯುವ ಜನತೆಗೆ ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಕೈಗೊಳ್ಳಲು ಮಾರ್ಗದರ್ಶನ ನೀಡುವ ಉದ್ಯಮ ಮತ್ತು ಉದ್ಯೋಗ ಪೋರ್ಟಲ್ ಗಳನ್ನು ನಿರ್ಮಾಣ ಮಾಡಿ ಚಾಲನೆಗೊಳಿಸಲಾಯಿತು.
ಸಮಾಜದ ಆಸಹಾಯಕ ಹಿರಿಜೀವಗಳು ಗೌರವಯುತವಾಗಿ ಬದುಕಲು ಶಾಶ್ವತನೆಲೆ ಕಲ್ಪಿಸುವ ವಯೋ-ವಂದನ ಯೋಜನೆಗೆ ಚಾಲನೆ ನೀಡಲಾಯಿತು. ವಯೋ-ವಂದನ ಲಾಂಭನ ವನ್ನು ಹಿರಿಯರಾದ ಶ್ರೀ ರಾಮಚಂದ್ರ ಕಾಮತ್ ರವರು ಲೋಕಾರ್ಪಣೆಗೊಳಿಸಿದರು. ವಯೋ-ವಂದನ ಯೋಜನೆಗೆ ನಿವೇಶನ ಖರೀದಿಗೆ ಸೆಂಟ್ಸ್ ಒಂದಕ್ಕೆ ತಲಾ ₹70,000/- ಕಾರ್ಯಕ್ರಮದಲ್ಲಿ ಚೆಕ್ ನೀಡುವ ಮೂಲಕ ದಾನಿಗಳು ಕೊಡುಗೆಯನ್ನು ಪ್ರಕಟಿಸಿದರು.
ಸಂಚಾಲಕ ಆರ್. ವಿವೇಕಾನಂದ ಶೆಣೈ ವಯೋವಂದನಾ ಯೋಜನೆಗಳ ವಿವರ ನೀಡಿದರು. ಕಟ್ಟಲ ನಿರ್ಮಾಣಕ್ಕೆ ನಿವೇಶನ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರದಲ್ಲಿಯೇ ಸೂಕ್ತವಾದ ನಿವೇಶನ ಖರೀದಿ ಮಾಡಿ ಕಟ್ಟಡ ನಿರ್ಮಾಣ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ ಕೋಟ ಸ್ವಾಗತಿಸಿ, ಪ್ರಾಸ್ತವನೆಗೈದರು.
ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ, ಕಾಪು ಹರೀಶ್ ನಾಯಕ್ ವಂದಿಸಿದರು.
ಉಡುಪಿ, ದ.ಕ, ಶಿವಮೊಗ್ಗ ಮತ್ತು ಉ.ಕ ಜಿಲ್ಲೆಗಳಿಂದ 2500 ಕ್ಕೂ ಹೆಚ್ಚಿನ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 393 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ,
ಉಡುಪಿ/ದ.ಕ/ಶಿವಮೊಗ್ಗ/ಉ.ಕ ಜಿಲ್ಲೆಯಲ್ಲಿ ತಂದೆತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ 171 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಎಸ್ಎಸ್ಎಲ್ಸಿ/ಪಿಯುಸಿ ಪದ ವಿ/ಸ್ನಾತಕೋತ್ತರ/ಇಂಜಿನಿಯರಿಂಗ್/ ಮೆಡಿಕಲ್/ ಸಿಎ/ಕಂಪೆನಿ ಸೆಕ್ರೆಟರಿ/ ಪಿಎಚ್ಡಿ ಸಾಧನೆಗೈದ ರಾಜ್ಯದ 148 ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸಾಣೂರು ಸರಕಾರಿ ಪದವಿಪೂರ್ವ ವಿದ್ಯಾಲಯದ 20 ಮಂದಿ ಮತ್ತು ಸಾಣೂರು ಸರಕಾರಿ ಪ್ರೌಢ ಶಾಲೆಯ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ಕನ್ನು ಪ್ರಾಂಶುಪಾಲೆ ಸುಚೇತಾ ಕಾಮತ್ ರವರಿಗೆ ಹಸ್ತಾಂತರಿಸಲಾಯಿತು.