ಉಡುಪಿ, ಸೆ.06: ಪಡುಬಿದ್ರೆ ಸಮೀಪದ ಹೆಜಮಾಡಿ ಟೋಲ್ ಬಳಿ ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳು 2025ರ ಆ.5 ರಂದು ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ತಂಡವನ್ನು ತಡೆಯಲು ಯತ್ನಿಸಿದಾಗ ಆರೋಪಿಗಳು ಪೊಲೀಸರ ಮೇಲೆ ವಾಹನ ಹರಿಸಿ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದರು.
ಇದೀಗ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಕಾಪು ನಿವಾಸಿಗಳಾದ ಸಫ್ವಾನ್,ಮೊಹಮ್ಮದ್ ಅಜೀಂ ಮತ್ತು ಬಜಪೆಯ ಮೊಹಮ್ಮದ್ ರಜಾಕ್ ಎಂಬವರನ್ನು ಬಂಧಿಸಲಾಗಿದೆ.
ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾಯುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA53MH5847 ನೇ ಕಾಫಿ ಬಣ್ಣದ ಫಾರ್ಚುನರ್ ಕಾರಿನಲ್ಲಿ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದನ್ನು ಕಂಡಾಗ ಕಾರಿನ ಚಾಲಕ ಪೊಲೀಸರನ್ನು ಉದ್ದೇಶಿಸಿ ನಮ್ಮನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುತ್ತೀರಾ ಎಂದು ಹೇಳಿ ಪೊಲೀಸರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದು ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ಇದೀಗ ಉಳಿದ ಮೂವರನ್ನು ಬಂಧಿಸಲಾಗಿದೆ.
ಆರೋಪಿ ಮೊಹಮ್ಮದ್ ರಜಾಕ್ ಬಜ್ಪೆ ಎಂಬಾತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಇರುತ್ತದೆ. ಇನ್ನೋರ್ವ ಆರೋಪಿ ಮೊಹಮ್ಮದ್ ಅಜಿಮ್ ಕಾಪು ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿದೆ.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಸೆಂಟ್ರಿಂಗ್ ಸಾಮಗ್ರಿಗಳ ಕಳ್ಳತನ, ಉತ್ತರ ಕನ್ನಡ ಜಿಲ್ಲೆಯ ಚಿತ್ತಾಕುಲ ಮತ್ತು ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ IPS ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಂವದ IPS ರವರ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು ಇ ( ಕಾ.ಸು) ಮತ್ತು ಅನಿಲ್ ಕುಮಾರ್(ತನಿಖೆ) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಹೆಡ್ ಕಾನ್ಸ್ಟೇಬಲ್ ನಾಗರಾಜ ಕಾನ್ಸ್ಟೇಬಲ್
ಕೃಷ್ಣರಾಜ ಹೆಗಡೆ, ಸಂದೇಶ ಮಹಿಳಾ ಕಾನ್ಸ್ಟೇಬಲ್ ರುಕ್ಮಿಣಿ ರವರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆಗೆ ಸಹಕರಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ,ಹೆಚ್ ಸಿ ದಿನೇಶ್ ರವರು ಸಹಕರಿಸಿದರು.