

ಬೆಂಗಳೂರು: ಕಾರ್ಕಳದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ನಲ್ಲಿ ಪರಶುರಾಮನ ಪ್ರತಿಮೆ ಮರು ನಿರ್ಮಿಸಿ ಅನಾವರಣಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಸಂಬAಧ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪರಶುರಾಮ ಪ್ರತಿಮೆಯನ್ನು ಮರು ನಿರ್ಮಿಸಲು ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ಅರ್ಜಿಯು ಆಗಸ್ಟ್ 20ರಂದು ವಿಚಾರಣೆಗೆ ಬಂದಿದ್ದಾಗ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುವ ಮೊದಲು ಪ್ರತಿಮೆ ನಿರ್ಮಾಣ ಆಗದಿದ್ದರೆ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಸಾಬೀತುಪಡಿಸಲು ಮತ್ತು ಪ್ರತಿಮೆ ನಿರ್ಮಾಣಕ್ಕೆ ಅರ್ಜಿದಾರರು ತಮ್ಮ ವೈಯಕ್ತಿಕ ಕಾಣಿಕೆಯಾಗಿ 5 ಲಕ್ಷ ರೂ ಗಳನ್ನು ಎರಡು ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಿ ಬಳಿ ಠೇವಣಿ ಇಡಬೇಕು ಎಂದು ಹೇಳಿತ್ತು. ಮಂಗಳವಾರ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಕೀಲರು ನ್ಯಾಯಾಲಯದ ನಿರ್ದೇಶನದಂತೆ 5 ಲಕ್ಷ ರೂ ಠೇವಣಿ ಇಡಲಾಗಿದೆ ಎಂದು ತಿಳಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಸರಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿದೆ.


