

ಕಾರ್ಕಳ,ಸೆ. 16 : ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ಅವರನ್ನು 24 ಗಂಟೆಯೊಳಗೆ ಬಂಧಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಜಾತಿ ಗಣತಿ ಹೆಸರಿನಲ್ಲಿ ಇದೀಗ ಹಿಂದುಳಿದ ವರ್ಗಗಳಲ್ಲಿ ಬಿಲ್ಲವ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಎಂದೆಲ್ಲಾ ಹೊಸ ಜಾತಿಯನ್ನು ಸೇರಿಸುವ ಮೂಲಕ ಹಿಂದೂಗಳನ್ನು ಜಾತಿಯ ಮೂಲಕ ವಿಭಜಿಸಿ ಅವರನ್ನು ಮತಾಂತರಗೊಳಿಸಲು ಕಾಂಗ್ರೆಸ್ ಸರ್ಕಾರವೇ ಪ್ರೇರೇಪಿಸುತ್ತಿದ್ದು ,ಇಂತಹ ಕುಮ್ಮಕ್ಕಿನ ವಿರುದ್ಧ ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಸೆ. 15ರಂದು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಕಳ ಮಂಡಲದ ನಗರ ಶಕ್ತಿಕೇಂದ್ರದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ,ಅಭಿವೃದ್ಧಿಗೆ ಒಂದು ರೂಪಾಯಿಯ ಅನುದಾನ ನೀಡದೇ ಅಧಿಕಾರ ನಡೆಸಬಹುದು ಎನ್ನುವುದನ್ನು ಕಾಂಗ್ರೆಸ್ ಸರಕಾರ ಸಾಬೀತುಪಡಿಸಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಯಾಮಾರಿಸಿ ಇತ್ತ ಅಭಿವೃದ್ಧಿಗೂ ಹಣ ನೀಡದೇ ರಾಜ್ಯದ ಜನರನ್ನು ವಂಚಿಸಿದೆ. ನಮ್ಮದು ಗ್ಯಾರಂಟಿ ಸರ್ಕಾರ ಎನ್ನುವ ಸಿದ್ದರಾಮಯ್ಯನವರದ್ದು ಬುರುಡೆ ಸರ್ಕಾರ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.ಪ್ರತೀ ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಗೆ ತಲಾ 10 ಕೋ. ರೂ. ಅನುದಾನ ನೀಡುತ್ತೇವೆ ಎಂದಿದ್ದ ಸಿಎಂ ಬಳಿಕ 10 ಹಣವನ್ನು ಬಿಡುಗಡೆ ಮಾಡಿಲ್ಲ.ಆದರೆ ಕಾರ್ಕಳದ ರಸ್ತೆಗಳ ಅಭಿವೃದ್ಧಿಗೆ 25 ಕೋ.ರೂ ಬಿಡುಗಡೆ ಮಾಡುತ್ತೇವೆ ಎಂದ ಉಸ್ತುವಾರಿ ಸಚಿವರು, ಈ ಹಿಂದೆ ಭರವಸೆ ನೀಡಿದ್ದ 10 ಕೋ.ರೂ ಅನುದಾನದ ಕುರಿತು ಮಾತನಾಡಲಿ ಎಂದು ಸವಾಲೆಸೆದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಭಾರತ ಈ ಹಿಂದೆಯೇ ಹಿಂದೂ ರಾಷ್ಟ್ರವಾಗಿತ್ತು. ಹಿಂದೂಗಳಿಗೆ ಏನೇ ಸಮಸ್ಯೆ ಆದರೂ ಮೊದಲಿಗೆ ಅದರ ವಿರುದ್ಧ ಧ್ವನಿ ಎತ್ತುವ ಹಾಗೂ ನ್ಯಾಯಕ್ಕಾಗಿ ಬಿಜೆಪಿ ಹೋರಾಟ ನಡೆಸುತ್ತಲೇ ಬಂದಿದೆ.ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಇವತ್ತಿನವರೆಗೆ ಅಲ್ಲಿಗೆ ಕಾಲಿಡಲಿಲ್ಲ. ಇದರಿಂದಲೇ ಅವರ ಮನಸ್ಸು ಎಂತಹದು ಎಂದು ತಿಳಿಯುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಕಾರ್ಯಕರ್ತರೇ ಕಟ್ಟಿದ ಪಕ್ಷ. ಕಾರ್ಯಕರ್ತರು ಜನರೊಂದಿಗೆ ಬೆರೆತಾಗ ಮಾತ್ರ ಪಕ್ಷಕ್ಕೆ ಹೆಸರು ಮತ್ತು ಗೆಲುವು ಬರುತ್ತದೆ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಕಾಂಗ್ರೆಸ್ ಸರಕಾರದ ಅಭಿವೃದ್ಧಿ ವಿರೋಧಿ ಚಟುವಟಿಕೆಗಳ ವಿರುದ್ಧ ನಮ್ಮ ಕಾರ್ಯಕರ್ತರಿಗೆ ಹೋರಾಟ ನಡೆಸುವ ಶಕ್ತಿಯಿದೆ, ನಮ್ಮ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನಕ್ಕೆ ಮುಂದಾದರೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ್ ಕುಮಾರ್, ಕೆ. ಪಿ.ಶೆಣೈ,ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಕಾರ್ಯದರ್ಶಿ ಜಯರಾಮ್ ಸಾಲಿಯಾನ್, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ಉಪಸ್ಥಿತರಿದ್ದರು. ಪುರಸಭಾ ಮಾಜಿ ಸದಸ್ಯೆ ದಿವ್ಯಾ ಡಿ. ಪೈ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ರವೀಂದ್ರ ಮೊಯ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಪ್ರಸಾದ್ ವಂದಿಸಿದರು.
ನಗರ ಶಕ್ತಿಕೇಂದ್ರ ನೂತನ ಅಧ್ಯಕ್ಷರಾಗಿ ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿಗಳಾಗಿ ವಿಘ್ನೇಶ್ ಪ್ರಸಾದ್ ಮತ್ತು ಸುರೇಶ್, ನಗರ ಯುವಮೋರ್ಚಾ ಅಧ್ಯಕ್ಷರಾಗಿ ಅಮರ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಅಕ್ಷಯ್ ಶೆಟ್ಟಿ ಮತ್ತು ರಾಜೇಶ್ ಆಚಾರ್ಯ, ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಮತಾ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಗೀತಾ ಕಲ್ಲೊಟ್ಟೆ ಮತ್ತು ದೀಪಾ ನಾಯಕ್ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭ ನಗರ ಶಕ್ತಿ ಕೇಂದ್ರದ ನೂತನ ಸಮಿತಿಯ ಸದಸ್ಯರನ್ನು ಹಾಗೂ 23 ವಾರ್ಡ್ ನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಗುರುತಿಸಿ ಗೌರವಿಸಲಾಯಿತು.


