ಕಾರ್ಕಳ, ಸೆ 18: ಪಂಚಾಯತ್ ರಾಜ್ ಇಲಾಖೆ ಸದಾ ಜನರೊಂದಿಗೆ ಇರುವ ಇಲಾಖೆಯಾಗಿದೆ. ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಾಗಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದಾಗ ಪಂಚಾಯತ್ ರಾಜ್ ಆಶಯಗಳು ಈಡೇರುವ ಜೊತೆಗೆ ಜನರ ವಿಶ್ವಾಸ ಗಳಿಸಲು ಸಾದ್ಯ ಎಂದು ಮರ್ಣೆ ಪಂಚಾಯತ್ ನಿರ್ಗಮನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಲಕರಾಜ್ ಅಭಿಪ್ರಾಯಪಟ್ಟರು.
ಅವರು ಉಡುಪಿ ತಾಲೂಕಿನ ಕಟಪಾಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮರ್ಣೆ ಗ್ರಾಮ ಪಂಚಾಯತ್ ಆಡಳಿತ,ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮರ್ಣೆ ಗ್ರಾಮ ಪಂಚಾಯತ್ ಸದಸ್ಯರು,ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ನನ್ನ ಸೇವಾವಧಿಯಲ್ಲಿ ಅತ್ಯುತ್ತಮ ಸಹಕಾರ ನೀಡಿದ್ದಾರೆ. ನೀವು ನೀಡಿದ ಸಹಕಾರಕ್ಕೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ಪಿಡಿಓ ತಿಲಕರಾಜ್ ಆವರು ಬಡವರ ಹಾಗೂ ಶೋಷಿತ ವರ್ಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮ ಅಭಿವೃದ್ಧಿಗೆ ಶ್ರಮಿಸಿದ ತಿಲಕರಾಜ್ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಆಡಳಿತ ಹಾಗೂ ಸಿಬ್ಬಂದಿಗಳ ಪರವಾಗಿ ಹಾಗೂ ಗ್ರಾಮಸ್ಥರು ನಿರ್ಗಮನ ಪಿಡಿಓ ತಿಲಕರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೇರಿ ಮಸ್ಕರೇನ್ಹಸ್, ಅಜೆಕಾರು ನಾಡಕಚೇರಿ ಉಪತಹಸೀಲ್ದಾರ್ ಮಹೇಶ್, ಗ್ರಾಮ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ, ಸ್ಥಳೀಯರಾದ ನಂದಕುಮಾರ್ ಹೆಗ್ಡೆ,ಪ್ರಶಾಂತ ಶೆಟ್ಟಿ, ಶಾಂತಿರಾಜ್ ಜೈನ್, ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಷಾ ಶೆಟ್ಟಿ,ನಾಡಕಚೇರಿ ಕಂದಾಯ ನಿರೀಕ್ಷಕ ರಿಯಾಜ್, ಪಶುವೈದ್ಯ ಪರಿವೀಕ್ಷಕ ಸರ್ವೋತ್ತಮ ನಾಯಕ್, ರತ್ನಾಕರ್ ಅಮೀನ್, ಜಗದೀಶ್ ಶೆಟ್ಟಿ,ಪಂಚಾಯತ್ ಸದಸ್ಯರಾದ ಯಶೋದಾ ಶೆಟ್ಟಿ, ರಾಕೇಶ್ ನಾಯ್ಕ್, ಜ್ಯೋತಿ ಪೂಜಾರಿ, ಹರೀಶ್ ಕಿಚ್ಚ, ಜಾನ್ ಟೆಲ್ಲಿಸ್, ಅಬ್ದುಲ್ ಗಫೂರ್,ಗುರುಪ್ರಸಾದ್ ರಾವ್, ಉದಯ ಕುಲಾಲ್, ರಾಜೇಶ್ ಶೆಟ್ಟಿ, ಕೃಷ್ಣಮೂರ್ತಿ ರಾವ್, ರಜನಿ, ವಿಜಯಾ ಮುಂತಾದವರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯ ರಾಘವೇಂದ್ರ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪಂಚಾಯತ್ ಸಿಬ್ಬಂದಿಗಳಾದ ಅರುಂಧತಿ, ಚಂದ್ರಶೇಖರ, ವಸಂತ, ಅಶ್ವಿತಾ, ಕಾಂತಿ, ಜಯಶ್ರೀ, ರಿಯಾಜ್ ಸಹಕರಿಸಿದರು.