Share this news

ಕಾರ್ಕಳ, ಸೆ,23: ರಸ್ತೆ ಗುಂಡಿಗಳಿಂದ ಜನರ ಹಾಗೂ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದ್ದು ಕಾಮಗಾರಿ ಆಧ್ವಾನದ ಕುರಿತು ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವತಿಯಿಂದ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಅಲ್ಲಲ್ಲಿ ರಸ್ತೆ ಅಗೆದ ಪರಿಣಾಮವಾಗಿ ರಸ್ತೆಗಳು ಹೊಂಡಮಯವಾಗಿದ್ದು, ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ಹಾಗೂ ಪುರಸಭೆ ಆಡಳಿತದ ವಿರುದ್ಧ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದರು.

ಈ ಕುರಿತು ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ, ಪುರಸಭೆಯ ಎಲ್ಲಾ 23 ವಾರ್ಡುಗಳಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹಾಕಿ ದುರಸ್ತಿಗೊಳಿಸುವ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಸದಸ್ಯರು
ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದು ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವಂತೆ ಒತ್ತಾಯಿಸಿದರು. ಅಮೃತ್ ಯೋಜನೆಯ ಕಾಮಗಾರಿ ಅವ್ಯವಸ್ಥೆಯ ವಿರುದ್ಧ ಜಿಲ್ಲಾಧಿಕಾರಿ ಬಳಿ ಸದಸ್ಯರು ತೆರಳಿ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಸದ ನಿರ್ವಹಣೆ ಕುರಿತು ಪ್ರದೀಪ್ ರಾಣೆ ಮಾತನಾಡಿ, ಪರಿಸರ ಅಭಿಯಂತರ ಹುದ್ದೆ ಖಾಲಿಯಿದ್ದು, ಕಸ ನಿರ್ವಹಣೆ ಗುತ್ತಿಗೆ ವಹಿಸಿಕೊಂಡ ಟಿಪ್ಸ್ ಸಂಸ್ಥೆ ಕಾಮಗಾರಿ ಸ್ಥಗಿತಗೊಳಿಸಿದ್ದು ಇದರಿಂದ ಡಂಪಿಂಗ್ ಯಾರ್ಡ್ ನಲ್ಲಿ ಸಮರ್ಪಕವಾಗಿ ಕಸ ವಿಂಗಡಣೆ ಆಗುತ್ತಿಲ್ಲ. ಇದರಿಂದ ಕಸ ವಿಲೇವಾರಿಯಾಗದೇ ಸಮಸ್ಯೆ ಬಿಗಡಾಯಿಸುತ್ತಿದೆ.ಪುರಸಭೆ ಆಡಳಿತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೀದಿ ನಾಯಿಗಳ ಕುರಿತು ಪುರಸಭೆ ವತಿಯಿಂದ ಯಾವುದೇ ಕ್ರಮವಾಗುತ್ತಿಲ್ಲ ಎಂದು ಅಶ್ಪಕ್ ಅಹಮ್ಮದ್ ಅಸಮಾಧಾನ ಹೊರಹಾಕಿ, ಮಕ್ಕಳು ತಂದೆ ತಾಯಿಗೆ ಹೆದರುತ್ತಿಲ್ಲ ಆದರೆ ಬೀದಿ ನಾಯಿಗಳಿಗೆ ಹೆದರುವಂತಾಗಿದೆ. ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡುವಂತೆ ಸುಪ್ರೀಂ ಆದೇಶ ನೀಡಿದೆ.ಆದರೆ ಯಾವುದೇ ಕ್ರಮವಾಗುತ್ತಿಲ್ಲ ಆದ್ದರಿಂದ ಪುರಸಭೆಯ ಆರೋಗ್ಯ ನಿರೀಕ್ಷಕರು ತಕ್ಷಣವೇ ಕ್ರಮ ಜರುಗಿಸಬೇಕು ಎಂದರು. ಈ ಕುರಿತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉತ್ತರಿಸಿ, ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಕೂಡಲೇ ಟೆಂಡರ್ ಕರೆದು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಬಡವರ ಮನೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗದೇ ಸಮಸ್ಯೆಯಾಗಿದ್ದು ಕೂಡಲೇ ಹಣ ಬಿಡುಗಡೆಗೊಳಿಸುವಂತೆ ನಳಿನಿ ಆಚಾರ್ಯ ಒತ್ತಾಯಿಸಿದರು.
ಕಾರ್ಕಳ ಬಸ್ಸು ನಿಲ್ದಾಣದಲ್ಲಿನ ಸಾರ್ವಜನಿಕ
ಸುಲಭ ಶೌಚಾಲಯಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ,ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.ಆದ್ದರಿಂದ ಪುರಸಭೆಯ ಪೈಪ್ ಲೈನ್ ನಲ್ಲಿ ಅನಧಿಕೃತ ನೀರಿನ ಸಂಪರ್ಕವನ್ನು ಪಡೆದವರ ನೀರಿನ ಪೈಪ್ ಲೈನ್ ತೆಗೆಯುವಂತೆ ಸದಸ್ಯೆ ಸುಮಾ ಕೇಶವ ಆಗ್ರಹಿಸಿದರು.
ಸಭೆಯಲ್ಲಿ ಪ್ರತಿಮಾ ರಾಣೆ, ಸೋಮನಾಥ ನಾಯ್ಕ್, ಹರೀಶ್ ಕುಮಾರ್,ವಿವೇಕಾನಂದ ಶೆಣೈ, ಮೀನಾಕ್ಷಿ ಗಂಗಾಧರ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ ಕೋಟ್ಯಾನ್ ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *