ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯಾದ್ಯಂತ ಈಗಾಗಲೇ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕಾರ್ಯ ಆರಂಭಗೊಂಡಿದ್ದು, ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶ ಮತ್ತು ರಾಜ್ಯ ಸರ್ಕಾರವೇ ಕಲೆ ಹಾಕಿರುವ ಅಂಕಿ ಅಂಶಗಳ ಆಧಾರದ ಮೇಲೆ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ.
ಈ ಕುರಿತು ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ ಆಹಾರ ಸಚಿವ ಮುನಿಯಪ್ಪ ಅವರು, ಕೇಂದ್ರ ಸರ್ಕಾರವೇ ಕರ್ನಾಟಕದಲ್ಲಿ 7 ಲಕ್ಷ 70 ಸಾವಿರ ಅನರ್ಹ ಬಿಪಿಎಲ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದ್ದು, ನಾವೂ ಸಹ ಒಟ್ಟು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಹೇಳಿದರು. ಅಷ್ಟೇ ಅಲ್ಲ ಅಕ್ಟೋಬರ್ ಮೊದಲ ವಾರದಲ್ಲಿ ಆಪರೇಷನ್ ಬಿಪಿಎಲ್ ಕಾರ್ಡ್ ಸಂಬಂಧ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.
ಇನ್ನು ಇದೇ ವೇಳೆ ಸ್ವಂತ ಮನೆ ಕಟ್ಟಿದವರಿಗೆ, ಸ್ವಂತ ಕಾರು ಹೊಂದಿದವರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ. ಸ್ವಯಂಪ್ರೇರಿತರಾಗಿ ಬಿಪಿಎಲ್ನಿಂದ ಎಪಿಎಲ್ಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಶೇಕಡಾ 75 ರಷ್ಟು ಜನ ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಬರುತ್ತಾರೆ. ಅಂದರೆ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಬಿಪಿಎಲ್ ಕಾರ್ಡ್ ಇದ್ದು, ಒಟ್ಟು 4 ಕೋಟಿ 50 ಲಕ್ಷ ಜನರು ಫಲಾನುಭವಿಗಳಾಗಿದ್ದಾರೆ. ಅನರ್ಹರ ಕಾರ್ಡ್ ರದ್ದು ಮಾಡಿ ಅರ್ಹರಿಗೆ ಯೋಜನೆಗಳನ್ನ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.