

ಮೈಸೂರು (ಅ.03): ಡಿಸೆಂಬರ್ ತಿಂಗಳಲ್ಲಿ ನಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳನ್ನು, ಕಾರ್ಯಕರ್ತರನ್ನು ಹಾಗೂ ಮಾಧ್ಯಮದವರನ್ನೂ ಕೂಡ ಆಹ್ವಾನಿಸುವುದಿಲ್ಲ ಇದು ಕೇವಲ ಕೌಟುಂಬಿಕ ಸಮಾರಂಭವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮನೆಯ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ತಾವು ನಿರ್ಮಿಸುತ್ತಿರುವ ಹೊಸ ಮನೆಯ ಗೃಹ ಪ್ರವೇಶ ಸಮಾರಂಭ ಡಿಸೆಂಬರ್‌ನಲ್ಲಿ ನಡೆಯಲಿದೆ. ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ಆದರೆ, ಇದು ಕೇವಲ ನಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆಯುವ ಸಮಾರಂಭವಾಗಿರುತ್ತದೆ. ಯಾರನ್ನೂ ಗೃಹ ಪ್ರವೇಶಕ್ಕೆ ಕರೆಯಲ್ಲ ಮಾಧ್ಯಮದವರನ್ನು ಕೂಡ ಆಹ್ವಾನಿಸುವುದಿಲ್ಲ, ಒಂದು ವೇಳೆ ನೀವು (ಮಾಧ್ಯಮದವರು) ಬಂದರೂ ಹೊರಗೆ ಕಳುಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ತಾವು ವಾಸಿಸುತ್ತಿರುವ ಮನೆಯ ಬಗ್ಗೆ ಮಾತನಾಡಿದ ಅವರು, ‘ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು. ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ಹೊಸ ಮನೆಗೆ ಸ್ಥಳಾಂತರಗೊAಡ ನಂತರವೂ, ಮರಿಸ್ವಾಮಿ ಅವರು ಈ ಮನೆಯನ್ನು ಖಾಲಿ ಇಟ್ಟರೆ, ಅದನ್ನು ಸಾರ್ವಜನಿಕರ ಭೇಟಿಗಾಗಿ ಬಳಸಿಕೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಜಾತಿ ಗಣತಿ ಪ್ರಗತಿ: ನಿಗದಿತ ಅವಧಿಯಲ್ಲಿ ಪೂರ್ಣ ವಿಶ್ವಾಸ:
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯ (ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ) ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ, ಗಣತಿ ಕಾರ್ಯ ತೀವ್ರ ಪ್ರಗತಿಯಲ್ಲಿದೆ. ಈವರೆಗೆ 3.5 ಕೋಟಿ ಜನರ ಗಣತಿಯಾಗಿದೆ. ಇನ್ನೂ 4 ದಿನ ಬಾಕಿ ಇದೆ. ಅಷ್ಟರೊಳಗೆ ರಾಜ್ಯದ 1.5 ಕೋಟಿ ಮನೆಯ ಗಣತಿ ಆಗುತ್ತದೆ. ನಿಗದಿತ ಅವಧಿಯೊಳಗೆ ಗಣತಿ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಆರಂಭದ 3 ದಿನಗಳ ಕಾಲ ತಾಂತ್ರಿಕ ದೋಷದಿಂದ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಆದರೆ ನಂತರ ಯಾವುದೇ ಸಮಸ್ಯೆ ಉಂಟಾಗಿಲ್ಲ. ನಿಗದಿತ ಅವಧಿಯೊಳಗೆ ಮುಗಿಯದಿದ್ದರೆ ಅಂದಿನ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾವು ಮಾಡುತ್ತಿರುವುದು ಸಮೀಕ್ಷೆ, ಜಾತಿ ಒಡೆಯುವುದಲ್ಲ
ಜಾತಿ ಗಣತಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಬಿಜೆಪಿ ನಾಯಕರ ಟೀಕೆಗಳಿಗೆ ಮುಖ್ಯಮಂತ್ರಿಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ‘ನಾವು ಜಾತಿಗಳನ್ನು ಎಲ್ಲಿ ಒಡೆಯುತ್ತಿದ್ದೇವೆ ತೋರಿಸಿ? ಬಿಜೆಪಿಯವರು ಮೋದಿ ಮೆಚ್ಚಿಸಲು ಏನೇನೋ ಮಾತನಾಡುತ್ತಿದ್ದಾರೆ. ಕ್ರಿಶ್ಚಿಯನ್, ಕುರುಬ, ಲಿಂಗಾಯತ, ದಲಿತ, ಬ್ರಾಹ್ಮಣ ಎಂಬುದನ್ನು ಸೃಷ್ಟಿ ಮಾಡಿದ್ದು ನಾನ್ನಲ್ಲ. ‘ಕಾಂತರಾಜ್ ವರದಿಯಲ್ಲಿ ಜನರೇ ಸ್ವಯಂಪ್ರೇರಿತರಾಗಿ ಅದನ್ನು ಬರೆಸಿದ್ದಾರೆ. ಅದಕ್ಕೆ ನಾನು ಏನು ಮಾಡಲು ಸಾಧ್ಯ? ಜನ ಮತಾಂತರವಾಗಿದ್ದರೆ ಅದನ್ನು ಬರೆಸುತ್ತಾರೆ. ಅದನ್ನು ಬರೆಸಬೇಡಿ ಎಂದು ಹೇಳಲು ನಾನು ಯಾರು? ಎಂದು ಪ್ರಶ್ನಿಸಿದರು.


