ಕಾರ್ಕಳ, ಅ.09: ಪ್ರೀತಿಸುತ್ತಿದ್ದ ಯುವತಿಯೊಂದಿಗಿನ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಗೆಳೆಯರೇ ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ಯುವಕ ಡೆತ್ ನೋಟ್ ಬರೆದಿಟ್ಟು ಲಾಡ್ಜಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.09ರಂದು ಗುರುವಾರ ಸಂಜೆ ಕಾರ್ಕಳ ತಾಲೂಕಿನ ಬೆಳ್ಮಣ್ ಸೂರಜ್ ಲಾಡ್ಜಿನಲ್ಲಿ ನಡೆದಿದೆ.
ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ(23) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ.
ಅಭಿಷೇಕ್ ಆಚಾರ್ಯ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ. ಬಳಿಕ ಇವರ ಪ್ರೇಮವು ದೈಹಿಕ ಸಂಪರ್ಕದವರೆಗೆ ಮುಂದುವರಿದಿತ್ತು. ಇಬ್ಬರು ಜೊತೆಗಿದ್ದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರಿಬ್ಬರ ಪ್ರೀತಿ ಪ್ರೇಮದ ವಿಷಯ ತಿಳಿದ ಅಭಿಷೇಕ್ ಆಚಾರ್ಯನ ಗೆಳೆಯರು ಆತನ ಮೊಬೈಲ್ ನಲ್ಲಿದ್ದ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನುವ ಮಾಹಿತಿ ಲಭಿಸಿದೆ. ನಿರಂತರ ಮಾನಸಿಕ ಕಿರುಕುಳಕ್ಕೆ ಹಾಗೂ ಮರ್ಯಾದೆಗೆ ಅಂಜಿದ ಅಭಿಷೇಕ್ ಬ್ಲಾಕ್ ಮೇಲ್ ಮಾಡುತ್ತಿದ್ದ ನಾಲ್ವರು ಯುವಕರ ಹೆಸರು ಡೆತ್ ನೋಟ್ ನಲ್ಲಿ ಬರೆದಿಟ್ಟು ಲಾಡ್ಜಿನಲ್ಲಿ ನೇಣಿಗೆ ಶರಣಾಗಿದ್ದಾನೆ.
ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಡೆತ್ ನೋಟ್ ಹಾಗೂ ಆತನ ಮೊಬೈಲ್ ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಅಭಿಷೇಕ್ ಬಳಸುತ್ತಿದ್ದ ಮೊಬೈಲ್ ರಿಟ್ರೀವ್ ಮಾಡಿದ ಬಳಿಕವೇ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಎನ್ನುವುದು ತಿಳಿದುಬರಬೇಕಿದೆ.