ಕಾರ್ಕಳ,ಅ.10:ಶೆಡ್ ಕಟ್ಟುವ ಕಾಮಗಾರಿ ಸಂದರ್ಭದಲ್ಲಿ ನೀರು ತುಂಬಿದ ಟ್ಯಾಂಕ್ ಏಕಾಎಕಿ ಕೆಲಸ ಮಾಡುತ್ತಿದ್ದ ಮೇಸ್ತ್ರಿಯೊಬ್ಬರ ಮೇಲೆ ಕುಸಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಜಾರ್ಕಳ ಎಂಬಲ್ಲಿ ಅ.9 ರಂದು ನಡೆದಿದೆ.
ಕಾರ್ಕಳ ತಾಲೂಕಿನ ಇರ್ವತ್ತೂರು ನಿವಾಸಿ ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಪ್ರಮೀಳಾ ಎಂಬವರ ಪತಿ ಆನಂದ(52) ಮೃತಪಟ್ಟ ದುರ್ದೈವಿ.
ಅವರು ಬೈಲೂರು ಸಮೀಪದ ಜಾರ್ಕಳದ ಉಮೇಶ್ ಎಂಬುವವರ ತೋಟದಲ್ಲಿ ಈ ದುರ್ಘಟನೆ ನಡೆದಿದ್ದು, ಮೇಸ್ತ್ರಿ ಕೆಲಸಗಾರರಾದ ಆನಂದ ಹಾಗೂ ಪರ್ಕಳದ ದಯಾನಂದ ಎಂಬುವವರು ಹೊಲೋಬ್ಲಾಕ್‌ನಿಂದ ಹೊಸದಾಗಿ ಶೆಡ್ ಕಟ್ಟುತ್ತಿದ್ದರು. ಮದ್ಯಾಹ್ನದ ವೇಳೆಗೆ ಶೆಡ್ ನಿರ್ಮಾಣದ ಪಕ್ಕದಲ್ಲಿದ್ದ ಹಳೆಯದಾದ ಕಬ್ಬಿಣದ ಸ್ಟ್ಯಾಂಡ್ ಮೇಲೆ ಇರಿಸಿದ್ದ ಸುಮಾರು 2 ಸಾವಿರ ಲೀಟರ್ ಸಾಮರ್ಥ್ಯದ ನೀರು ತುಂಬಿದ ಟ್ಯಾಂಕ್ ಏಕಾಎಕಿ ಕಬ್ಬಿಣದ ಸ್ಯಾಂಡ್ ಸಹಿತ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ದಯಾನಂದ, ಆನಂದ ಮತ್ತು ಜಾಗದ ಮಾಲೀಕ ಉಮೇಶ್ ರವರ ಮೇಲೆ ಏಕಾಏಕಿ ಕುಸಿದು ಬಿದ್ದಿದೆ.
ಈ ಪೈಕಿ ಆನಂದ ಎಂಬವರ ಮೇಲೆ ಟ್ಯಾಂಕ್ ಹಾಗೂ ಕಬ್ಬಿಣದ ಸ್ಟ್ಯಾಂಡ್ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟರೆ, ದಯಾನಂದ ಅವರ ಕಾಲಿನ ಮೂಳೆ ಮುರಿದಿದ್ದು, ಉಮೇಶ್ ಅವರಿಗೆ ತಲೆಗೆ ಗಾಯವಾಗಿತ್ತು. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೈಲೂರು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
ಹಳೆಯ ಕಬ್ಬಿಣದ ಸ್ಟ್ಯಾಂಡ್ ಮೇಲೆ ಎರಡು ಸಾವಿರ ಲೀಟರ್ ಸಾಮರ್ಥ್ಯದ ನೀರು ತುಂಬಿದ ಟ್ಯಾಂಕ್ ಪಕ್ಕದ ಮಣ್ಣು ಕುಸಿದ ಪರಿಣಾಮವಾಗಿ ಭಾರ ತಾಳಲಾರದೇ ನೀರಿನ ಟ್ಯಾಂಕ್ ಕುಸಿದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಉಮೇಶ್ ರವರ ನಿರ್ಲಕ್ಷ್ಯತನದ ಪರಿಣಾಮ ಅಮಾಯಕ ವ್ಯಕ್ತಿ ಬಲಿಯಾಗಿದ್ದು ಮಾತ್ರ ವಿಪರ್ಯಾಸ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.