ಕಾರ್ಕಳ, ಅ,12: ರಾಜ್ಯದಲ್ಲಿ ಆರೆಸೆಸ್ಸ್ ನಿಷೇದಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ, ಕಳೆದ 100 ವರ್ಷಗಳಲ್ಲಿ ಆರೆಸೆಸ್ಸ್ ದೇಶಭಕ್ತ ಸಂಘಟನೆಯಾಗಿ ಜಗತ್ತಿನ ಕೋಟ್ಯಾಂತರ ಜನರ ಮನಸ್ಸು ಗೆದ್ದಿದೆ. ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಷ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಅಂಶಗಳನ್ನು ಅರ್ಥಮಾಡಿಕೊಳ್ಳದೇ ಆರೆಸೆಸ್ಸ್ ಬಗ್ಗೆ ವಿನಾ ಕಾರಣ ಟೀಕೆ ಮಾಡುವುದು ಇದು ಹೊಸತೇನಲ್ಲ. ನಿಮ್ಮ ತಂದೆ ಗೃಹ ಸಚಿವರಾಗಿದ್ದಾಗಲೇ RSS ನಿಷೇಧಿಸಲು ಆಗಿಲ್ಲ, ಪ್ರಿಯಾಂಕ್ ಖರ್ಗೆಯವರು ಎರಡೂವರೆವರ್ಷದ ಅಧಿಕಾರ ಅವಧಿಯಲ್ಲಿ ತಮ್ಮ ಇಲಾಖೆಯಲ್ಲಿ ಒಂದೇ ಒಂದು ಜನಪರ ಯೋಜನೆಗಳನ್ನು ಕೈಗೊಳ್ಳದೇ ಕೇವಲ ಕತ್ತೆ ಕಾಯುವ ಕೆಲಸವೇ ಅವರ ಸಾಧನೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ಅವರು ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆರೆಸೆಸ್ಸ್ ಟೀಕೆ ಮಾಡಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಸಲುವಾಗಿ ಪ್ರಿಯಾಂಕ ಖರ್ಗೆ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ರಸ್ತೆಗಳು ಗುಂಡಿಮಯವಾಗಿವೆ. ತಮ್ಮ ಆಡಳಿತದ ಎರಡೂವರೆ ವರ್ಷದ ಅವಧಿಯಲ್ಲಿ ಒಂದು ಕಿಮೀ ರಸ್ತೆ ನಿರ್ಮಸಲು ಆಗಿಲ್ಲ, ಗ್ರಾಮ ಪಂಚಾಯಿತಿಗಳಿಗೆ ಒಂದೇ ಒಂದು ನಿವೇಶನ ಹಾಗೂ ಅನುದಾನ ನೀಡಲು ತಮ್ಮ ಇಲಾಖೆ ಮೂಲಕ ಸಚಿವ ಪ್ರಿಯಾಂಕ್ ಖರ್ಗೆಗೆ ಸಾಧ್ಯವಾಗಿಲ್ಲ. ಮಾತ್ರವಲ್ಲದೇ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ ಜಿಲ್ಲೆಗಳಿಗೆ ಪ್ರವಾಸವನ್ನೇ ಮಾಡಿಲ್ಲ. ತನ್ನ ವೈಫಲ್ಯ ಮುಚ್ಚಿ ಹಾಕಲು ಮಾಧ್ಯಮಗಳ ಮುಂದೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರದ ಮದದಿಂದ ಇಂತಹ ಹೇಳಿಕೆಗಳು ಖಂಡನೀಯ, ನಿಮ್ಮ ತಂದೆಯವರು ಗೃಹ ಸಚಿವರಾಗಿದ್ದಾಗಲೇ ಆರೆಸೆಸ್ಸ್ ಚಟುವಟಿಕೆಳನ್ನು ನಿಷೇಧಿಸಲು ಸಾಧ್ಯವಾಗಿಲ್ಲ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿ ಏನೂ ಕಿಸಿಯಲು ಸಾಧ್ಯವಿಲ್ಲ. ತಾನೊಬ್ಬ ಸಚಿವ ಎನ್ನುವ ಅಧಿಕಾರದ ಮದದ ಕಾರಣಕ್ಕೆ ಇಂತಹ ದುರಂಹಕಾರದ ಹೇಳಿಕೆ ನೀಡುತ್ತಿದ್ದೀರಿ. ನೀವೂ ಶಾಶ್ವತವಲ್ಲ ನಿಮ್ಮ ಅಧಿಕಾರವೂ ಶಾಶ್ವತವಲ್ಲ, ಆದರೆ ಆರೆಸೆಸ್ಸ್ ವಿಚಾರಗಳು ಸಾವಿರಾರು ವರ್ಷ ಶಾಶ್ವತವಾಗಿರುತ್ತದೆ. ರಾಷ್ಟ್ರದ ಹಿತಕ್ಕಾಗಿ ನಮ್ಮಂತಹ ಕೋಟ್ಯಾಂತರ ಕಾರ್ಯಕರ್ತರು ಸಂಘಟನೆಯಲ್ಲಿ ದೇಶಸೇವೆಗೆ ಸದಾ ಸಿದ್ದರಿದ್ದಾರೆ.
ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಒಂದೇ ಒಂದು ಜನಪರ ಯೋಜನೆ ಜಾರಿಗೊಳಿಸದೇ ಕೇವಲ ಕತ್ತೆ ಕಾಯುವ ಕೆಲಸ ಮಾಡಿದ್ದ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಪ್ರವಾಹ ಸಂತ್ರಸ್ತರ ನೆರವಿಗೆ ಬರದೇ ನಾಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ಕೆಟ್ಟ ಸರ್ಕಾರ ಅಧಿಕಾರದಲ್ಲಿದೆ. ಸಿದ್ಧರಾಮಯ್ಯನವರಿಗೆ ತನ್ನ ಸಂಪುಟದ ಸಚಿವರ ಮೇಲೆ ನಿಯಂತ್ರಣವೇ ಇಲ್ಲ. ರಾಜ್ಯ ಸರ್ಕಾರದ ಆಡಳಿತಯಂತ್ರ ಸಂಪೂರ್ಣವಾಗಿ ಹಳಿ ತಪ್ಪಿದೆ. ಕಾಂಗ್ರೆಸ್ ಪಕ್ಷದಲ್ಲಿ ದಿನಬೆಳಗಾದರೆ ಮುಂದಿನ ಸಿಎಂ ಯಾರು, ಸಚಿವರು ಯಾರು ಎನ್ನುವ ಚರ್ಚೆ ಬಿಟ್ಟರೆ ರಾಜ್ಯದ ಜನರ ಹಿತದ ಕುರಿತು ಸರ್ಕಾರಕ್ಕೆ ಕಾಳಜಿಯಿಲ್ಲ. ಸರ್ಕಾರಕ್ಕೆ ತಾಕತ್ತಿದ್ದರೆ ಆರೆಸೆಸ್ಸ್ ನಿಷೇಧಿಸಿ, ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ ಎಂದು ಸುನಿಲ್ ಕುಮಾರ್ ಸವಾಲೆಸೆದರು.