ಬೆಂಗಳೂರು, ಅ.15: ರಾಜ್ಯದ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳಲ್ಲಿ ದೊಡ್ಡ ಬದಲಾವಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, 2025-26ನೇ ಸಾಲಿನಿಂದಲೇ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತೀರ್ಣತಾ ಅಂಕವನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಕೆ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ.ಹೊಸ ನಿಯಮದ ಪ್ರಕಾರ ಲಿಖಿತ ಹಾಗೂ ಆಂತರಿಕ ಅಂಕ ಸೇರಿ ಪಿಯುಸಿಯಲ್ಲಿ ಪ್ರತಿ ವಿಷಯದಲ್ಲೂ ಕನಿಷ್ಠ 30 ಅಂಕ ಕಡ್ಡಾಯವಾಗಿರಲಿದೆ. SSLC ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 30 ಅಂಕ ಪಡೆದರೆ ವಿದ್ಯಾರ್ಥಿಗಳು ತೇರ್ಗಡ ಆಗಲಿದ್ದಾರೆ.
ಪ್ರಸ್ತುತ 625 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಟ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.
ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಪೈಕಿ ಶೇಕಡಾ 33ರಷ್ಟು ಪರವಾಗಿ 701 ಪತ್ರ ಮತ್ತು ಶೇ.35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು. ಹೀಗಾಗಿ 2025-26ನೇ ಸಾಲಿನಿಂದ SSLCಯಲ್ಲಿ ಪ್ರಥಮ ಭಾಷೆ ಹೊರತುಪಡಿಸಿ ಶೇ. 33 ಫಲಿತಾಂಶ ಬಂದರೆ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ. ಪ್ರಥಮ ಭಾಷೆ ಗರಿಷ್ಠ ಅಂಕವನ್ನು 125ರಿಂದ 100ಕ್ಕೆ ಇಳಿಸುವ ವಿಚಾರದ ಬಗ್ಗೆಯೂ ಚರ್ಚೆಯಾಗಿದ್ದು, ಇದು ಇನ್ನೂ ಅಂತಿಮವಾಗಿಲ್ಲ. ಸಾರ್ವಜನಿಕರ ಅಭಿಪ್ರಾಯ ಪಡೆದೇ ಈ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.