ಬೆಂಗಳೂರುಅ.16: ಶಾಲಾ ಆವರಣಗಳು ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿರ್ಬಂಧಿಸುವ ಪ್ರಸ್ತಾವನೆಗೆ ಸಂಬಂಧಪಟ್ಟಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಕೋರಿ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಿಳುನಾಡು ಮಾದರಿಯಲ್ಲಿ ಸಂಘದ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಗಳನ್ನು ನೋಡಿದರೆ ಇಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಅನೌಪಚಾರಿಕ ಚರ್ಚೆ ನಡೆಯುವುದು ಬಹುತೇಕ ಖಚಿತವಾಗಿದೆ.