ಕಲಬುರಗಿ, ಅ,16: ಆರೆಸೆಸ್ಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂ ಗೆ ಮನವಿ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಿನೇಶ್ ನರೋಣಿ ಎಂದು ಗುರುತಿಸಲಾಗಿದ್ದು, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಿನೇಶ್ ನರೋಣಿ ಮಹಾರಾಷ್ಟ್ರದ ಲಾತೂರ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದಕ್ಕೆ ದಿನೇಶ್ ನರೋಣಿ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಕಾಂಗ್ರೆಸ್ ಮುಖಂಡ ಮನೋಹರ್ ಎನ್ನುವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದು ರಾತ್ರಿ ಸದಾಶಿವನಗರ ಠಾಣೆಗೆ ಕರೆತರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಕಾರಿ ಶಾಲೆ, ಕಾಲೇಜು ಆವರಣಗಳಲ್ಲಿ ಆರ್ಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರುತ್ತಿವೆ. ಕರೆ ಮಾಡಿದವರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ತನಗೆ ಧಮ್ಕಿ ಹಾಕಿರುವುದನ್ನು ಸ್ವತಃ ಪ್ರಿಯಾಂಕ್ ಖರ್ಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದರು.