ಉಡುಪಿ, ಅ,17: ತುಳುನಾಡಿನ ದೈವಗಳ ಕಾರ್ಣಿಕವನ್ನು ಜಗತ್ತಿಗೆ ಪರಿಚಯಿಸಿದ ರಿಷಭ್ ಶೆಟ್ಟಿಯವರ ಕಾಂತಾರ ಚಿತ್ರ ರಾಜ್ಯಾದ್ಯಂತ ಧೂಳೆಬ್ಬಿಸುತ್ತಿದ್ದು, ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಹಳ್ಳಿ ಸೊಗಡು, ಆಚಾರ,ವಿಚಾರಗಳಿಂದ ಕೂಡಿದ ಭೂತಾರಾಧನೆಯ ಮಹತ್ವ ಸಾರುವ ಕಾಂತಾರ ಚಿತ್ರ ವೀಕ್ಷಣೆಗೆ ಇದೀಗ ಪೊಲೀಸರ ತಂಡವೂ ಚಿತ್ರಮಂದಿರಕ್ಕೆ ಎಂಟ್ರಿಯಾಗಿದೆ. ದಿನನಿತ್ಯದ ಕಾರ್ಯ ಒತ್ತಡ, ದೈನಂದಿನ ಬದುಕಿನ ಜಂಜಾಟ ಬದಿಗಿಟ್ಟ ಉಡುಪಿ ಜಿಲ್ಲಾ ಪೊಲೀಸರು ಕಾಂತಾರ ಚಿತ್ರ ವೀಕ್ಷಿಸಿ ಫುಲ್ ಮನರಂಜನೆ ಪಡೆದುಕೊಂಡಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಪೊಲೀಸ್ ಸಿಬ್ಬಂದಿಗಳನ್ನು ಕೇವಲ ಕರ್ತವ್ಯಕ್ಕಾಗಿ ನಿಯೋಜಿಸದೇ ಅವರಿಗೂ ಒಂದಷ್ಟು ರಿಲ್ಯಾಕ್ಸ್ ಕೊಡುವ ನಿಟ್ಟಿನಲ್ಲಿ ಕಾಂತಾರಾ ಚಾಪ್ಟರ್ 1 ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ನೂರಾರು ಪೊಲೀಸ್ ಸಿಬ್ಬಂದಿಗಳು ಉಡುಪಿಯ ಕಲ್ಪನಾ ಥೀಯೇಟರ್ ನಲ್ಲಿ ಕಾಂತಾರ ಚಿತ್ರ ವೀಕ್ಷಿಸಿ, ಫುಲ್ ಎಂಜಾಯ್ ಮಾಡಿದ್ದಾರೆ. ದಿನ ಬೆಳಗಾದರೆ ಬಂದೋಬಸ್ತು, ಅಪರಾಧ ಪ್ರಕರಣಗಳ ತನಿಖೆ, ಕೊಲೆ, ದರೋಡೆ ಮುಂತಾದ ಪ್ರಕರಣಗಳನ್ನು ನಿಭಾಯಿಸುವ ಒತ್ತಡದಲ್ಲಿರುವ ಪೊಲೀಸರಿಗೆ ಕಾಂತಾರ ಚಿತ್ರ ಖುಷಿ ನೀಡಿದೆ.
ಒಟ್ಟಿನಲ್ಲಿ ಪೊಲೀಸರ ಮನಸ್ಸಿಗೂ ಒಂದಷ್ಟು ಮುದ ನೀಡಿ ಅವರ ಕಾರ್ಯಚಟುವಟಿಕೆಗಳಿಗೆ ಹುರುಪು ತುಂಬಿದ ಎಸ್ಪಿಯವರ ವಿಭಿನ್ನ ಚಿಂತನೆಗೆ ಪೊಲೀಸ್ ಸಿಬ್ಬಂದಿಗಳು ಅಭನಂದಿಸಿದ್ದಾರೆ.