ಕಾರ್ಕಳ, ಅ,19: ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹನಿಟ್ರಾಪ್ ನಡೆದಿದೆ ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಆತ ಸಾಯುವ ವೇಳೆ ತನ್ನ ಸಾವಿಗೆ ನಾಲ್ವರು ಕಾರಣವೆಂದು ಡೆತ್ ನೋಟ್ ಬರೆದಿಟ್ಟ ವಿಚಾರದಲ್ಲಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಗೃ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಹಿಂದುಳಿದ ವರ್ಗ ಮನವಿ ಸಲ್ಲಿಸಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರ ಮೂಲಕ ಗೃಹ ಸಚಿವರಿಗೆ ರಾಜ್ಯ ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಉದಯ್ ಜಿ ಆಚಾರ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಅರ್ಚನಾ ಆಚಾರ್ಯ ಮುಂತಾದವರು ಮನವಿ ಸಲ್ಲಿಸಿ ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಹಣಕ್ಕಾಗಿ ಬೆದರಿಕೆ ಹಾಕಿ ವಸೂಲಿ ಮಾಡಿ ನಿರಂತರ ಕಿರುಕುಳ ನೀಡಿದ ಪರಿಣಾಮ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದ ಆರೋಪಿಗಳಿಕೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಮನವಿಗೆ ಗೃಹ ಸಚಿವರು ತಕ್ಷಣವೇ ಸ್ಪಂದಿಸಿ ಸಂಬAಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮತ್ತು ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.