
ಕಾರ್ಕಳ, ನ.14: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ NDA ಒಕ್ಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ನಾಯಕತ್ವಕ್ಕೆ ಬಿಹಾರದ ಜನ ಆಶೀರ್ವಾದ ಮಾಡಿದ್ದಾರೆ. ಮಹಾಘಟಬಂಧನ ಪ್ರಯೋಗಿಸಿದ ಅಪಪ್ರಚಾರದ ಸರಕು, ಅಭಿವೃದ್ಧಿ ರಾಜಕಾರಣದ ಮುಂದೆ ಮಂಕಾಗಿದೆ.
ಚುನಾವಣಾ ವ್ಯವಸ್ಥೆಯ ಬಗ್ಗೆ ಅನುಮಾನ ಸೃಷ್ಟಿಸಿ ಪ್ರಜಾಪ್ರಭುತ್ವದ ಆಶಯಗಳನ್ನೇ ಗಾಳಿಗೆ ತೂರಿದ್ದ ರಾಹುಲ್ ಗಾಂಧಿಯವರ ಮತಚೋರಿ ಅಭಿಯಾನ ಮಕಾಡೆ ಮಲಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ಮಹಾಘಠಿಬಂಧನ್ ನ ಮತ ಚೋರಿಯಾಗುವ ಫಲಿತಾಂಶ ಇದು. ರಾಹುಲ್ ಗಾಂಧಿಯವರ ಹೈಡ್ರೋಜನ್ ಬಾಂಬ್ ಅಂತಿಮವಾಗಿ ಬಿಹಾರ ಕಾಂಗ್ರೆಸ್ ಕಚೇರಿಯಲ್ಲಿ ಸ್ಪೋಟಗೊಂಡಿದೆ. ಬಿಹಾರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆದ್ದೇ ಗೆಲ್ಲುತ್ತದೆ ಎಂಬ ಹಮ್ಮಿನಲ್ಲಿ ಹೈಕಮಾಂಡ್ ಸಂತುಷ್ಟಗೊಳಿಸುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಅವಿರತ ಪ್ರಯತ್ನವನ್ನು ನಡೆಸಿದ್ದರು. ಸಿಎಂ ಹಾಗೂ ಡಿಸಿಎಂ ಇಬ್ಬರೂ ವರಿಷ್ಠರನ್ನು ಓಲೈಸುವುದಕ್ಕೆ ಪೈಫೋಟಿಗೆ ಬಿದ್ದಿದ್ದರು.
ಈ ಅವಧಿಯಲ್ಲಿ ಅಪಾರ ಪ್ರಮಾಣದ ಕಪ್ಪ ಕಾಣಿಕೆ ಕಾಂಗ್ರೆಸ್ ವರಿಷ್ಠರಿಗೆ ರವಾನೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕೆಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ

