
ಕಾರ್ಕಳ, ನ. 17:ಜೆಸಿಐ ಸಂಸ್ಥೆಗಳು ನಡೆಸುವ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಗಳಿಂದ ಯುವಜನತೆಯನ್ನು ಬಲಿಷ್ಠ ಮಾಡಲು ಸಾಧ್ಯವಿದೆ. ಇದರಿಂದ ಉತ್ತಮ ಸಮಾಜ, ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಜೇಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಹೇಳಿದರು.ಅವರು ನವೆಂಬರ್ 15ರಂದು ಜೆಸಿಐ ಬೆಳ್ಮಣ್ ಸಂಸ್ಥೆಯ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.
ನೂತನ ಅಧ್ಯಕ್ಷರಾದ ವೀರೇಂದ್ರ ಆರ್ ಕೆ ಅವರ ಸಂಪುಟಕ್ಕೆ ಶುಭ ಹಾರೈಸಿದ ಅವರು ಜೆಸಿಐ ಬೆಳ್ಮಣ್ ಸಂಸ್ಥೆಯ 46 ವರ್ಷಗಳ ಸುದೀರ್ಘ ಪರಂಪರೆಗೆ ಅಭಿನಂದನೆ ಸಲ್ಲಿಸಿದರು. ವಲಯ ಉಪಾಧ್ಯಕ್ಷರಾದ ಡಾಕ್ಟರ್ ಹರಿಣಾಕ್ಷಿ ಕರ್ಕೇರಾ, ಪತ್ರಕರ್ತರಾದ ನಿಟ್ಟೆ ವಿಲಾಸ್ ಕುಮಾರ್ ಅವರು ಗೌರವಾನ್ವಿತ ಅತಿಥಿಗಳಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ನಿರ್ಗಮನ ಅಧ್ಯಕ್ಷ ಇನ್ನಾ ಪ್ರದೀಪ್ ಶೆಟ್ಟಿಯವರು ತನ್ನ ಅಧಿಕಾರದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು. ಅವರ ಸೇವೆಯನ್ನು ಗುರುತಿಸಿ ಅವರನ್ನು ಜೆಸಿಐ ಸಂಸ್ಥೆಯ ಪರವಾಗಿ ಚಿನ್ನದ ಉಂಗುರ ಸಹಿತವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೂತನವಾಗಿ ಸಂಸ್ಥೆಗೆ ಸೇರಿದ 18 ಸದಸ್ಯರಿಗೆ ವಲಯಾಧ್ಯಕ್ಷರು ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ಕೆ ಅವರು ಅಭಿನಂದನಾ ಭಾಷಣ ಮಾಡಿದರು. ನೂತನ ಅಧ್ಯಕ್ಷ ವೀರೇಂದ್ರ ಆರ್ ಕೆ ಅವರು ಎಲ್ಲರ ಸಹಕಾರ ಕೋರಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಜೇಸಿಐ ಸಂಸ್ಥೆಯ ಪೂರ್ವಾಧ್ಯಕ್ಷ ಮುರಳೀಧರ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ಅಮಿತಾ ರವಿರಾಜ್, ಸರ್ವಜ್ಞ ತಂತ್ರಿ, ಮಂಜಪ್ಪ ಕರಿಗಾರ್,ದೀಪಕ್ ಕಾಮತ್ ಮೊದಲಾದವರು ವಿವಿಧ ಅತಿಥಿಗಳನ್ನು ಪರಿಚಯ ಮಾಡಿದರು.
ನಿಕಟಪೂರ್ವ ಅಧ್ಯಕ್ಷೆ ಸರಿತಾ ದಿನೇಶ್ ಅವರು ಶುಭಾಶಂಸನೆ ಮಾಡಿದರು. ಜಯಶ್ರೀ ಪ್ರಕಾಶ್ ಅವರು ನೂತನ ಅಧ್ಯಕ್ಷರನ್ನು ಪರಿಚಯ ಮಾಡಿದರು. ಶ್ವೇತಾ ಸುಭಾಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತ ಮಾಡಿದರು. ಅನ್ನಪೂರ್ಣ ಕಾಮತ್ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯದರ್ಶಿ ಶ್ವೇತಾ ಆಚಾರ್ಯ, ಮಹಿಳಾ ಜೆಸಿಐ ಅಧ್ಯಕ್ಷೆ ಅನಿತಾ ವಸಂತ್, ಯುವಜೆಸಿ ಅಧ್ಯಕ್ಷ ಪ್ರಜ್ವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

