
ಕಾರ್ಕಳ : ಯಕ್ಷಗಾನದಲ್ಲಿ ಸಲಿಂಗ ಕಾಮ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಪ್ರತಿಪಾದಿಸಿರುವುದು ಕನ್ನಡದ ಶ್ರೀಮಂತ ಕಲಾಪ್ರಕಾರಕ್ಕೆ ಮಾಡಿದ ಅಪಮಾನವಾಗಿದ್ದು ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕೆಂದು ಕನ್ನಡ ಸಂಸ್ಕ್ರತಿ ಇಲಾಖೆ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಯಕ್ಷಗಾನ ಒಂದು ದೈವಿಕ ಕಲೆ. ದಕ್ಷಿಣೋತ್ತರ ಕನ್ನಡದ ಸಾವಿರಾರು ಕಲಾವಿದರು ವ್ಯವಸಾಯಿ ಮೇಳ ಹಾಗೂ ಹವ್ಯಾಸಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮ್ಮ ಹೇಳಿಕೆಯಿಂದ ಒಂದು ಕಲಾಪ್ರಕಾರವನ್ನೇ ಅಸಹ್ಯವಾಗಿಸುವ ಪ್ರಯತ್ನವನ್ನು ಬಿಳಿಮಲೆ ನಡೆಸಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹುತಾತ್ಮ ಸೈನಿಕರ ಜಾತಿ ಹುಡುಕಿ ವಿವಾದ ಸೃಷ್ಟಿಸಿದ್ದ ಬಿಳಿಮಲೆಯವರು ಈಗ ಯಕ್ಷಗಾನ ಕಲಾವಿದರ ಬಗ್ಗೆ ಅದೇ ಅಪಹಾಸ್ಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಕ್ಕೆ ಸಾಧ್ಯವಿಲ್ಲ. ಇದು ಇಡಿ ಕಲಾ ಪ್ರಕಾರವನ್ನು ಮುಜುಗರಕ್ಕೆ ದೂಡುವ ಕೃತ್ಯ ಎಂದು ಟೀಕಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಂಥ ಹೇಳಿಕೆ ನೀಡುವಾಗ ಸಮಷ್ಠಿ ಜವಾಬ್ದಾರಿ ಪ್ರದರ್ಶಿಸಬೇಕಿತ್ತು. ಸ್ಥಾನ ಗೌರವವನ್ನು ಅರಿಯಬೇಕಿತ್ತು. ಆದರೆ ಬಿಳಿಮಲೆಯವರು ತಮ್ಮ ಮಾತಿನ ಚಪಲದಿಂದ ನಾಲಗೆ ಹರಿಯಬಿಟ್ಟಿದ್ದಾರೆ. ಈ ಬೇಜವಾಬ್ದಾರಿ ವರ್ತನೆಗಾಗಿ ಸರ್ಕಾರ ಅವರನ್ನು ತಕ್ಷಣ ಪ್ರಾಧಿಕಾರದ ಜವಾಬ್ದಾರಿಯಿಂದ ವಜಾಗೊಳಿಸಬೇಕು ಎಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

